ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ, ನಮ್ಮಲ್ಲಿ ಬಿದ್ದಿರುವ ನೊಣ ನೋಡೋದಕ್ಕೆ ಬಂದಿದ್ದಾರೆ: ಅಶೋಕ್

ಬೆಂಗಳೂರು: ನಮ್ಮಲ್ಲಿ ಒಬ್ಬರೇ ನಾಯಕರು. ಕಾಂಗ್ರೆಸ್ ನಲ್ಲಿ ಒಂದೇ ಮನೆ ನಾಲ್ಕು ಬಾಗಿಲು ಆಗಿದೆ. ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ, ಆದರೆ ಅವರು ನಮ್ಮಲ್ಲಿ ಬಿದ್ದಿರುವ ನೊಣ ನೋಡೋದಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ಕಾಂಗ್ರೆಸ್‍ನವರು ಮೊದಲು ನಿಮ್ಮ ತಟ್ಟೆ ಶುದ್ದಿ ಮಾಡಿ, ಗಂಜಲ ಹಾಕ್ತಿರೋ ಇನ್ನೇನು ಹಾಕಿ ಕ್ಲೀನ್ ಮಾಡ್ತೀರೋ ನೋಡಿಕೊಳ್ಳಿ. ಆಮೇಲೆ ಬೇರೆಯವರನ್ನು ಟೀಕೆ ಮಾಡುವುದನ್ನು ಕಲಿಯಿರಿ. ಕಾಂಗ್ರೆಸ್‍ನಲ್ಲಿ ದಲಿತರು ಸಿಎಂ ಆಗಬೇಕು ಅಂತ ಒಂದು ಬಾಗಿಲು, ಒಕ್ಕಲಿಗರು ಆಗಬೇಕು ಅಂತ ಒಂದು ಬಾಗಿಲು, ಹಿಂದುಳಿದ ವರ್ಗದವರು ಆಗಬೇಕು ಅಂತ ಒಂದು ಬಾಗಿಲು, ಲಿಂಗಾಯತರು ಸಿಎಂ ಆಗಬೇಕು ಅಂತ ಮತ್ತೊಂದು ಬಾಗಿಲು ಆಗಿದೆ. ನಿಮ್ಮ ಮನೆಯಲ್ಲಿ ಎದ್ದಿರುವ ಬಿಲಗಳನ್ನು ಮೊದಲು ಮುಚ್ಚಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಎಸ್‍ವೈ ಜನರ ನಡುವಿನಿಂದ ಬಂದವರು, ಆತಂಕ ಡಿಕೆಶಿಗೆ ಇರಬಹುದು: ಬೊಮ್ಮಾಯಿ

ಕಾಂಗ್ರೆಸ್‍ನ ಪ್ರಮುಖರು ದೆಹಲಿ ಹೋಗುತ್ತಿದ್ದಾರೆ. ಎರಡು ಬಣ ಈಗಾಗಲೇ ದೆಹಲಿ ಹೋಗಿದೆ, ಉಳಿದ ಎರಡು ಬಣ ಬೆಂಗಳೂರಿನಲ್ಲೇ ಇದೆ. ಆದರೆ ನಮ್ಮಲ್ಲಿ ಎಲ್ಲವೂ ಕ್ಲಿಯರ್ ಇದೆ. ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಹೇಳಿಕೆ ನೀಡಿದ್ದಾರೆ.

ಕೊರೊನಾ ಮೂರನೇ ಅಲೆಯಿಂದ ಮಕ್ಕಳ ಮೇಲೆ ಪರಿಣಾಮದ ಬಗ್ಗೆ ಈಗಾಗಲೇ ಸರ್ಕಾರ ಕ್ರಮಕೈಗೊಂಡಿದೆ. ಮೂರನೇ ಅಲೆ ತಡೆಯಲು ಸರ್ಕಾರ ಸನ್ನದ್ದವಾಗಿದೆ. ಸರ್ಕಾರದಿಂದ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಯ ಅಪೌಷ್ಟಿಕತೆ ಇರುವ ಮಕ್ಕಳ ಮಾಹಿತಿ ಸಂಗ್ರಹಿಸುವ ಕಾರ್ಯವಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರದ ಕಡೆಯಿಂದಲೇ ಪೌಷ್ಟಿಕ ಆಹಾರ ಒದಗಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರತಿ ಜಿಲ್ಲೆಯಲ್ಲೂ 1000-3000 ಅಪೌಷ್ಟಿಕ ಮಕ್ಕಳಿದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲೇ ಸುಮಾರು 1500 ಜನ ಅಪೌಷ್ಟಿಕತೆ ಮಕ್ಕಳಿದ್ದಾರೆ. ಹಾಗಾಗಿ ಸರ್ಕಾರ ಎರಡು ತಿಂಗಳ ಕಾಲ ಪೌಷ್ಟಿಕ ಆಹಾರ ನೀಡಲು ಮುಂದಾಗಿದೆ. ಕೋವಿಡ್ ಮೂರನೇ ಅಲೆ ಬರುವ ಮೊದಲೇ ಪೌಷ್ಟಿಕ ಆಹಾರ ಕೊಡೋದಕ್ಕೆ ಕಂದಾಯ ಇಲಾಖೆಯಿಂದ ಡಿಸಿಗಳಿಗೆ ಹಣ ಬಿಡುಗಡೆಯಾಗಿದ್ದು, ಈ ಹಣದಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಣ್ಣು, ಹಾಲು, ವಿಟಾಮಿನ್ ಯುಕ್ತ ಟ್ಯಾಬ್ಲೆಟ್ ಮತ್ತು ಡ್ರೈ ಫ್ರೂಟ್ಸ್ ಹಣ್ಣುಗಳನ್ನೂ ಎರಡು ತಿಂಗಳು ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

Comments

Leave a Reply

Your email address will not be published. Required fields are marked *