ಕಾಂಗ್ರೆಸ್ ಕಾರ್ಯಕರ್ತನಿಗೆ ಕಾರ್ಕಳ ಎಸ್‍ಐ ಮಧು ಹಲ್ಲೆ – ತನಿಖೆಗೆ ಸಿದ್ದರಾಮಯ್ಯ ಒತ್ತಾಯ

ಉಡುಪಿ: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಪೊಲೀಸರು ಹಲ್ಲೆ ನಡೆಸಿರುವ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಈ ಕುರಿತಂತೆ ತನಿಖೆ ನಡೆಯಾಗಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕಾರ್ಕಳ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ಹಿರ್ಗಾನ ಎಂಬವರಿಗೆ ಕಾರ್ಕಳ ನಗರ ಪೊಲೀಸ್ ಎಸ್ ಐ ಮಧು ಹಲ್ಲೆ ನಡೆಸಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ. ವರ್ಷದ ಹಿಂದೆ ಫೇಸ್ ಬುಕ್‍ನಲ್ಲಿ ಯೋಧರ ವಿರುದ್ಧ ರಾಧಾಕೃಷ್ಣ ನಾಯಕ್ ಪೋಸ್ಟ್ ಹಾಕಿರುವುದಾಗಿ ಆರೋಪಿಸಿ ಕಾರ್ಕಳ ಠಾಣೆಯಲ್ಲಿ ಹಿಂದೂ ಜಾಗರಣ ವೇದಿಕೆ ದೂರು ನೀಡಿತ್ತು. ವಿಚಾರಣೆಗೆ ಕಾರ್ಕಳ ಪೊಲೀಸರು ಕರೆಸಿಕೊಂಡಿದ್ದಾಗ ನನ್ನ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿ ಬೆಂಗಳೂರಿನೆಡೆ ಹೋಗಿದ್ದರು ಎನ್ನಲಾಗಿದೆ.

ನಕಲಿ ಅಕೌಂಟ್ ಮಾಡಿ ಈ ಪೋಸ್ಟ್ ಹಾಕಿರುವ ಬಗ್ಗೆ, ಬೆಂಗಳೂರಿನಲ್ಲಿ ದೂರು ನೀಡಿರುವುದಾಗಿ ರಾಧಾಕೃಷ್ಣ ಹೇಳಿದ್ದರು. ನಂತರ ಇತ್ತೀಚೆಗೆ ಬೆಂಗಳೂರಿನಿಂದ ವಾಪಸಾಗಿದ್ದ ರಾಧಾಕೃಷ್ಣ ಕಾರ್ಕಳದಲ್ಲಿ ನೆಲೆಸಿದ್ದರು. ಈ ವೇಳೆ ಕಾರ್ಕಳ ಪೊಲೀಸರು ಅವರನ್ನು ತನಿಖೆಗೆ ಬರುವಂತೆ ಸೂಚನೆ ನೀಡಿದ್ದರು. ತನಿಖೆಗೆ ಹಾಜರಾದ ವೇಳೆ ರಾಧಾಕೃಷ್ಣ ಏಕವಚನ ಮತ್ತು ಉಡಾಫೆ ಮಾತುಗಳನ್ನಾಡಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ಇದೆ.

ಎಸ್.ಐ ಮಧು ನಿಂದಿಸಿ, ಹಲ್ಲೆ ನಡೆಸಿದ್ದಾಗಿ ರಾಧಾಕೃಷ್ಣ ದೂರಿದ್ದಾರೆ. ಒಂದು ವರ್ಷದಷ್ಟು ಹಳೆಯ ಪೋಸ್ಟಿಗೆ ಮತ್ತೆ ಠಾಣೆಗೆ ಕರೆಸಿಕೊಂಡು, ಹಲ್ಲೆ ನಡೆಸಿರುವುದರ ಬಗ್ಗೆ ಆರೋಪಿಸಿದ್ದಾರೆ. ಹೃದಯದ ಕಾಯಿಲೆಯಿಂದ ಬಳಲುತ್ತಿರುವ ರಾಧಾಕೃಷ್ಣಗೆ, ಹಲ್ಲೆ ನಡೆಸಿರುವುದು ಅಮಾನವೀಯ ಎಂದು ಕಾಂಗ್ರೆಸ್ ನಾಯಕರು ಆಕ್ಷೇಪಿಸಿದ್ದಾರೆ. ಸದ್ಯ ರಾಧಾಕೃಷ್ಣ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವೇಶ
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಈ ಘಟನೆಯನ್ನು ಖಂಡಿಸಿದ್ದಾರೆ. ಉಡುಪಿ ಎಸ್.ಪಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಾರ್ಕಳ ಬ್ಲಾಕ್ ಕಾಂಗ್ರೆಸ್, ಉಡುಪಿ ಜಿಲ್ಲಾ ಕಾಂಗ್ರೆಸ್ ಈ ಬಗ್ಗೆ ಮುಂದೆ ಹೋರಾಟ ನಡೆಸುವ ಸಾಧ್ಯತೆ ಇದೆ.

ಕುಂದಾಪುರ ಡಿ.ಎಸ್‍ಪಿಯನ್ನು ವಿಚಾರಣೆಗೆ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಘಟನೆ ಸಂಬಂಧ ಎಲ್ಲಾ ರೀತಿಯ ವಿಚಾರಣೆ ಮಾಡಲಾಗುವುದು ಎಂದು ಎಸ್.ಪಿ ವಿಷ್ಣುವರ್ಧನ್ ಮಾಹಿತಿ ನೀಡಿದರು. ಇದನ್ನೂ ಓದಿ: ಟೊಮೆಟೋ ಮಾರ್ಕೆಟ್‍ನಲ್ಲಿ ಭಾರೀ ಗಲಾಟೆ

Comments

Leave a Reply

Your email address will not be published. Required fields are marked *