ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ: ಬಿ.ಸಿ.ಪಾಟೀಲ್

-ಕರ್ನಾಟಕ ಬಂದ್ ದುರದೃಷ್ಟಕರ

ಹಾವೇರಿ: ಕರ್ನಾಟಕ ಬಂದ್ ಮಾಡಿರುವುದು ದುರದೃಷ್ಟಕರವಾಗಿದ್ದು, ಇಂದಿನ ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಜಿಲ್ಲೆಯ ಹಿರೇಕೆರೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರೈತ ಮುಖಂಡರ ಸಭೆ ಮಾಡಿ ತಿದ್ದುಪಡಿಯಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದ್ದರು. ಪ್ರಧಾನಿ ಮೋದಿ ಅವರು ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಆದರೂ ಬಂದ್ ಮಾಡುತ್ತಿರುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟರು.

ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳಿಂದ ಆಗುವ ಲಾಭಗಳ ಬಗ್ಗೆ ಪ್ರಧಾನಿಗಳೇ ಹೇಳಿದ್ದಾರೆ. ಅನವಶ್ಯಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಂದ್‍ಗೆ ಬೆಂಬಲ ಕೊಟ್ಟಿದ್ದಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಯನ್ನು ತೆಗಿಯಬೇಕು ಎಂದು ಹೇಳಿದ್ದರು. ಭೂ ಸುಧಾರಣೆ ಕಾಯ್ದೆಯ 79 ಮತ್ತು 80 ಕಲಂ ಕೈಬಿಡಬೇಕು ಎಂದು ಈ ಹಿಂದೆ ಪ್ರಿಯಾಂಕ್ ಖರ್ಗೆ, ದೇಶಪಾಂಡೆ, ಡಿಕೆ ಶಿವಕುಮಾರ್ ಅವರೇ ವಿಧಾನಸಭೆಯಲ್ಲೇ ಹೇಳಿದ್ದರು. ಆದರೆ ಈಗ ಬಂದ್‍ಗೆ ಬೆಂಬಲ ಸೂಚಿಸಿರುವುದು ಅವರ ದ್ವಿಮುಖ ನೀತಿ ಎದ್ದುಕಾಣುತ್ತದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡಿರುವ ದಾಖಲೆಗಳು ವಿಧಾನಸಭೆಯ ರೆಕಾರ್ಡ್ ನಲ್ಲಿದೆ. ಕಾಂಗ್ರೆಸ್ ನಾಯಕರದ್ದು ದ್ವಿಮುಖ ನೀತಿ. ಹೇಳುವುದು ಒಂದು, ಮಾಡುವುದು ಮತ್ತೊಂದು. ಕಾಂಗ್ರೆಸ್ ಪಕ್ಷ ಇಂದು ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿದ್ದು, ತಮ್ಮ ಅಸ್ತಿತ್ವದ ಉಳಿವಿಗಾಗಿ ಕಾಂಗ್ರೆಸ್ ನಾಯಕರು ಬಂದ್‍ಗೆ ಬೆಂಬಲ ನೀಡಿದ್ದಾರೆ. ಬಂದ್ ಬೇಡ ಎಂದು ಸಿಎಂ ರೈತ ಬಾಂಧವರಲ್ಲಿ ಮನವಿ ಮಾಡಿದ್ದರು. ಆದರೂ ರೈತರು ಬಂದ್ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದರು.

Comments

Leave a Reply

Your email address will not be published. Required fields are marked *