ಕಾಂಗ್ರೆಸ್‍ನಲ್ಲಿ ಸಿಎಂ ಸ್ಥಾನಕ್ಕೆ ಇಬ್ಬರಲ್ಲ, ಬಹಳ ಮಂದಿಯ ಕ್ಯೂ ಇದೆ – ಸತೀಶ್ ಜಾರಕಿಹೊಳಿ

ಬಾಗಲಕೋಟೆ: ಕಾಂಗ್ರೆಸ್‍ನಲ್ಲಿ ಸಿಎಂ ಆಗಲು ಸಿದ್ದರಾಮಯ್ಯ, ಡಿಕೆಶಿ ಇಬ್ಬರೇ ಅಲ್ಲ ಬಹಳ ಜನ ಕ್ಯೂನಲ್ಲಿದ್ದಾರೆ ಎಂದು ಬಾಗಲಕೋಟೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ, ಕಾಂಗ್ರೆಸ್‍ನಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಗೊಂದಲವಿದೆ. ಎಲ್ಲರಿಗೂ ಸಿಎಂ ಆಗಬೇಕು ಎಂಬ ಆಸೆ ಇರುತ್ತದೆ. ಕೆಲವರು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ ಮತ್ತೆ ಕೆಲವರು ಹೇಳಿಕೊಳ್ಳುವುದಿಲ್ಲ. ಅದೇನು ದೊಡ್ಡ ಪ್ರಶ್ನೆಯಲ್ಲ. ಕಾಂಗ್ರೆಸ್‍ನಲ್ಲಿ ಸಿಎಂ ಆಗಲು ಸಿದ್ದರಾಮಯ್ಯ, ಡಿಕೆಶಿ ಇಬ್ಬರಿದ್ದಾರೆ. ಅವರ ಹಿಂದೆ ಬಹಳ ಜನ ಇದ್ದಾರೆ. ನಾವು ಅವರದ್ದು ಆದ ಮೇಲೆ ಎಂದು ಈಗಾಗಲೇ ಹೇಳಿದ್ದೀವಿ. ಕಾಂಗ್ರೆಸ್‍ನಲ್ಲಿ ಸಿಎಂ ಸ್ಥಾನಕ್ಕೆ ಅವರಿಬ್ಬರು ಯಾಕೆ ಬಹಳ ಜನ ಕ್ಯೂನಲ್ಲಿದ್ದಾರೆ. 2023ರಲ್ಲಿ ನಮಗೆ 113ಸ್ಥಾನ ಬರಬೇಕು. ಶಾಸಕರನ್ನು ಆಯ್ಕೆ ಮಾಡಬೇಕು. ನಂತರ ಸಿಎಂ ಸ್ಥಾನ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.

ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಸಂಬಂಧಿಸಿದಂತೆ ಮಾತನಾಡಿದ ಸತೀಶ್ ಜಾರಕಿಹೊಳಿ ಸಿಎಂ ಇಬ್ರಾಹಿಂನವರು ಪಕ್ಷದಲ್ಲಿ ಕೆಲವೊಂದು ವಿಚಾರಗಳನ್ನು ಸರಿಪಡಿಸಿಕೊಳ್ಳಲು ಹೇಳಿಕೊಂಡಿದ್ದಾರೆ. ಅದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಪಕ್ಷವೆಂದ ಮೇಲೆ ಕೆಲವೊಂದು ಸಮಸ್ಯೆಗಳು ಇದ್ದೆ ಇರುತ್ತದೆ. ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಪಕ್ಷಕ್ಕಿದೆ ಎಂದರು.

ಬಿಎಸ್ ಯಡಿಯೂರಪ್ಪನವರು ಸಿಎಂ ಸ್ಥಾನದಲ್ಲಿಯೇ ಇರುತ್ತಾರೋ, ಬಿಡುತ್ತಾರೋ ನಮಗೆ ಗೊತ್ತಿಲ್ಲ. ಯಡಿಯೂರಪ್ಪನವರು ಹೋದರೆ ಬೇರೆ ಯಾರಾದರೂ ಸಿಎಂ ಆಗುತ್ತಾರೆ. ಅದಕ್ಕಾಗಿಯೇ ಕಾಯುತ್ತಾ ಕೂರುವುದಕ್ಕೆ ಆಗುವುದಿಲ್ಲ. ಯಡಿಯೂರಪ್ಪ ಸಿಎಂ ಆಗಿರ್ತಾರೋ ಅಥವಾ ಬೇರೆಯವರು ಆಗುತ್ತಾರೋ ಎನ್ನುವುದು ನಮ್ಮ ಪಕ್ಷಕ್ಕೆ ಸಂಬಂಧ ಪಟ್ಟ ವಿಷಯವಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲಲು ಯಾರಿದ್ದರೂ ನಮ್ಮ ಹೋರಾಟ ನಾವು ಮಾಡಲೇಬೇಕು. ಇದೀಗ 2023ಕ್ಕೆ ಕಾಂಗ್ರೆಸ್ ಹೇಗೆ ಅಧಿಕಾರಕ್ಕೆ ಬರಬೇಕೆಂದು ಚರ್ಚೆ ಮಾಡಬೇಕಾಗಿರುವುದು ಎಂದು ಹೇಳಿದರು. ಚುನಾವಣೆಗೆ ಎರಡೂವರೆ ವರ್ಷವಿದೆ. ಈಗ ಚುನಾವಣೆಯ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.

ಎಸ್.ಟಿ ಮೀಸಲು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಶ್ರೀರಾಮುಲು ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯಲ್ಲ. ಅದು ನಮ್ಮ ಹಕ್ಕು, ನ್ಯಾಯಬದ್ಧವಾಗಿ ನಮಗೆ ಸಿಗಲೇಬೇಕು. ಆದರೆ ಅದನ್ನು ರಾಜಕೀಯ ಗಿಮಿಕ್ ಮಾಡಿಕೊಳ್ಳಬಾರದು ಎಂದು ಹೇಳಿದರು.

Comments

Leave a Reply

Your email address will not be published. Required fields are marked *