ಕವರ್ ಡ್ರೈವ್ ಹೊಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಕಾರ್ಕಳದ ಕುವರಿ

ಉಡುಪಿ: ಮನೆಯ ಅಂಗಳದಲ್ಲಿ ಕ್ರಿಕೆಟ್ ಆಟವಾಡುತ್ತಾ ಕವರ್ ಡ್ರೈವ್ ಹೊಡೆದ ಕಾರ್ಕಳದ ಹುಡುಗಿಯೊಬ್ಬಳು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾಳೆ.

ಉಡುಪಿ ಜಿಲ್ಲೆಯ ಕಾರ್ಕಳ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಜ್ಯೋತಿ ಕೊರೊನಾ ಲಾಕ್‍ಡೌನ್ ಸಂದರ್ಭ ಮನೆಯ ಅಂಗಳದಲ್ಲಿ ಆಡುತ್ತಾ ಬಾರಿಸಿದ ಕವರ್ ಡ್ರೈವ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲಾಗುತ್ತಿದೆ. ಕೇವಲ ಆರು ಸೆಕೆಂಡ್ ಇರುವ ಈ ವಿಡಿಯೋವನ್ನು ಅಂತಾರಾಷ್ಟ್ರೀಯ ಮಾಧ್ಯಮ ಕ್ರಿಕ್ ಇನ್‍ಫೋ ಪೋಸ್ಟ್ ಮಾಡಿದ್ದು, ಇಂಥದೊಂದು ಹೊಡೆತವನ್ನು ನೀವು ಎಂದಾದ್ರೂ ನೋಡಿದ್ದಿರಾ ಅಂತ ಬಣ್ಣಿಸಿದೆ.

ಲೆಗ್ ಸೈಡ್ ಬಂದ ಚೆಂಡಿನ ಮೇಲೆ ಹದ್ದಿನ ಕಣ್ಣಿನ ಗುರಿಯಿಟ್ಟ ಹುಡುಗಿ ಆಫ್‍ಸೈಡ್‍ಗೆ ಅಟ್ಟಿದ್ದಾರೆ. ಹುಡುಗಿಯ ಕವರ್ ಡ್ರೈವ್ ಶಾಟ್ ನೋಡಿ ಕ್ರಿಕೆಟ್ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಲ್ಲದೆ ಈಕೆ ಹೊಡೆದ ಕವರ್ ಡ್ರೈವ್ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟಿಗರನ್ನೇ ನಾಚಿಸುವಂತಿದೆ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ.

ಚಿಕ್ಕ ವಯಸ್ಸಿನಿಂದಲೇ ಶಾಲಾ ದಿನಗಳಲ್ಲೂ ಕೂಡ ಜ್ಯೋತಿ, ಹುಡುಗರು ಆಡೋ ಮೈದಾನದಲ್ಲಿ ಚೆಂಡನ್ನು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸುತ್ತಿದ್ದಳು. ಇದೀಗ ಮನೆಯವರ ಜೊತೆ ಅಂಗಳದಲ್ಲಿ ಕ್ರಿಕೆಟ್ ಆಡುವಾಗ ಚಿತ್ರೀಕರಿಸಿದ ವಿಡಿಯೋ ವೈರಲ್ ಆಗಿದೆ. ಗ್ರಾಮೀಣ ಮಟ್ಟದ ಪ್ರತಿಭೆ ಕೇವಲ ಪ್ರತಿಭೆಯಾಗಿಯೇ ಉಳಿದಿದೆ. ಸೂಕ್ತ ತರಬೇತಿ ಸಿಕ್ಕಿದರೆ ಈಕೆ ಖಂಡಿತವಾಗಿಯೂ ಉತ್ತಮ ಆಟಗಾರ್ತಿ ಆಗುತ್ತಾಳೆ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಇಷ್ಟೆಲ್ಲ ಆದರೂ ಜ್ಯೋತಿ ಮಾಧ್ಯಮಗಳ ಮುಂದೆ ಬರೋದಕ್ಕೆ ಹಿಂಜರಿದಿದ್ದಾಳೆ.

Comments

Leave a Reply

Your email address will not be published. Required fields are marked *