ಕಳ್ಳಸಾಗಣೆ ಬಗ್ಗೆ ಪೊಲೀಸರಿಗೆ ಮಾಹಿತಿ – ಸೋದರಿಯ ಮಗನಿಂದ್ಲೇ ಗುಂಡಿಕ್ಕಿ ಮಹಿಳೆ ಹತ್ಯೆ

ತಿರುವನಂತಪುರಂ: 34 ವರ್ಷದ ಮಹಿಳೆಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ  ಪಾಲಪ್ಪೆಟ್ಟಿ ನಿವಾಸಿ ಚಂದ್ರಿಕಾಳನ್ನು ಶುಕ್ರವಾರ ರಾತ್ರಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಹುಡುಗ ಸೇರಿದಂತೆ ಮೂವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಚಂದ್ರಿಕಾಳ ಸಹೋದರಿಯ ಮಗನಾದ 20 ವರ್ಷದ ಕಲಿಯಪ್ಪನ್ ಪಾಲಪ್ಪೆಟ್ಟಿಯಲ್ಲಿರುವ ತನ್ನ ಜಮೀನಿನಲ್ಲಿ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಶ್ರೀಗಂಧ ಮರಗಳ ಕಳ್ಳಸಾಗಣೆ ಮಾಡುತ್ತಿದ್ದ ಕಲಿಯಪ್ಪನನ್ನು ಇತ್ತೀಚೆಗೆ ಅರಣ್ಯ ಇಲಾಖೆ ಬಂಧಿಸಿತ್ತು. ಈ ಮಾಹಿತಿಯನ್ನು ಚಂದ್ರಿಕಾ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ಕಳೆದ ವಾರ ಕಲಿಯಪ್ಪನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಹೀಗಾಗಿ ಈ ದ್ವೇಷದಿಂದಾಗಿ ಕಲಿಯಪ್ಪನ್, ಚಂದ್ರಿಕಾಳನ್ನು ಕೊಲೆ ಮಾಡಿದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ವಶಕ್ಕೆ ಪಡೆದ ಇತರ ಆರೋಪಿ 19 ವರ್ಷದ ಮಣಿ. ಅಪ್ರಾಪ್ತ ಹುಡುಗ ಅಪರಾಧದ ಸಮಯದಲ್ಲಿ ಕಲಿಯಪ್ಪನ್ ಜೊತೆಯಿದ್ದನು. ಘಟನೆಯ ನಂತರ ಚಂದ್ರಿಕಾ ಅವರ ನೆರೆಹೊರೆಯವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರದೇಶವು ಅರಣ್ಯ ಪ್ರದೇಶದ ಸಮೀಪದಲ್ಲಿದೆ ಮತ್ತು ರಸ್ತೆ ಮುಗಿದ ನಂತರ ಅಲ್ಲಿಗೆ ತಲುಪಲು ಒಂದು ಗಂಟೆಯ ಸಮಯ ಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಕಲಿಯಪ್ಪನ್ ಈ ಪ್ರದೇಶದ ಇನ್ನೊಬ್ಬ ವ್ಯಕ್ತಿಗೆ ಸೇರಿದ ಬಂದೂಕಿನಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯು ಬಂದೂಕನ್ನು ಇಟ್ಟುಕೊಂಡಿದ್ದನು. ಅದನ್ನು ಬೇಟೆಯಾಡಲು ಬಳಸಲಾಗುತ್ತಿತ್ತು. ಇದು ಕಾನೂನು ಬಾಹಿರವಾದ್ದರಿಂದ ವ್ಯಕ್ತಿಯು ಬಂದೂಕನ್ನು ಕಾಡಿನಲ್ಲಿ ಅಡಗಿಸಿಟ್ಟಿದ್ದನು. ಕಲಿಯಪ್ಪನ್‍ಗೆ ಆ ಸ್ಥಳದ ಬಗ್ಗೆ ತಿಳಿದಿತ್ತು. ಹೀಗಾಗಿ ಅಲ್ಲಿಂದ ಬಂದೂಕನ್ನು ತೆಗೆದುಕೊಂಡು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ನಡೆದಾಗ ಆರೋಪಿಗಳು ಮದ್ಯಪಾನ ಮಾಡಿದ್ದರು. ಸದ್ಯಕ್ಕೆ ನಾವು ಅವರಿಂದ ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಆದರೆ ಅವರು ನಮ್ಮ ಪ್ರಶ್ನೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿ ಹೇಳಿದರು.

Comments

Leave a Reply

Your email address will not be published. Required fields are marked *