ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2 ತಿಂಗಳ ಕಾಲಾವಕಾಶ: ಪ್ರಭು ಚವ್ಹಾಣ್

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪಶುಸಂಗೋಪನೆ ಇಲಾಖೆಯ ಪಶುವೈದ್ಯಕೀಯ ಸಹಾಯಕ ಮತ್ತು ಪರೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಇನ್ನೂ 2 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವರು, ಕೋವಿಡ್ ಹಿನ್ನೆಲೆಯಲ್ಲಿ ಅನೇಕ ಅಭ್ಯರ್ಥಿಗಳಿಗೆ ಪಶುವೈದ್ಯಕೀಯ ಸಹಾಯಕ ಮತ್ತು ಪಶುವೈದ್ಯಕೀಯ ಪರೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ತೊಂದರೆ ಆಗಿರುವ ಕುರಿತು ಕಲ್ಯಾಣ ಕರ್ನಾಟಕ ಭಾಗದ ಅನೇಕ ಉದ್ಯೋಗಾಕಾಂಕ್ಷಿಗಳು ಕರೆ ಮಾಡಿ ತಮ್ಮ ಅಸಾಹಾಯಕತೆಯನ್ನು ತೋಡಿಕೊಂಡಿದ್ದರು. ಈ ಕುರಿತಾಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅರ್ಜಿ ಸಲ್ಲಿಸಲು 2 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದಿದ್ದಾರೆ.

ಪಶುವೈದ್ಯಕೀಯ ಸಹಾಯಕ 83 ಹುದ್ದೆಗಳು ಮತ್ತು ಪಶುವೈದ್ಯಕೀಯ ಪರೀಕ್ಷಕ 32 ಹುದ್ದೆಗಳಿಗೆ 2021ರ ಜೂನ್ 16 ರಿಂದ ಜೂನ್ 18ರವರೆಗೆ ಕಾಲಾವಕಾಶ ನೀಡಲಾಗಿದೆ ಒಟ್ಟು 115 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪಶುಸಂಗೋಪನೆ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಸುಮಾರು ಹುದ್ದೆಗಳು ಖಾಲಿಯಿದ್ದು, ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮೇಣ ಪಶುಸಂಗೋಪನೆ ಇಲಾಖೆಯಲ್ಲಿ ನೆಮಕಾತಿಗೆ ಕ್ರಮವಹಿಸಲಾಗುತ್ತಿದೆ. ಸದ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಪಶು ವೈದ್ಯಕೀಯ ಸೇವೆಯನ್ನು ಹೆಚ್ಚು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *