ಕಲಬುರಗಿಯಲ್ಲಿ ಭಾರೀ ಮಳೆ- ಟಿಸಿಗೆ ಬೆಂಕಿ, ಪೊಲೀಸ್ ಠಾಣೆಗೆ ನುಗ್ಗಿದ ನೀರು

ಕಲಬುರಗಿ: ಜಿಲ್ಲೆಯ ಹಲವೆಡೆ ರಾತ್ರಿ ಸುರಿದ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ.

ಭಾರೀ ಮಳೆ ಸುರಿದ ಪರಿಣಾಮ ಸೇಡಂ ತಾಲೂಕಿನ ಬಟಗೇರಾ ಗ್ರಾಮದ ಸಮೀಪದಲ್ಲಿರುವ 220 ಕೆ.ವಿ ವಿದ್ಯುತ್ ಸಬ್ ಸ್ಟೇಷನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಪಟ್ಟಣದ ಪೊಲೀಸ್ ಠಾಣೆಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ.

ಮಳೆ ವಿಪರೀತವಾಗಿ ಸುರಿಯುತ್ತಿದ್ದಂತೆ ಬಾಂಬ್ ಸಿಡಿದಂತೆ ಶಬ್ದ ಉಂಟಾಗಿದೆ. ನಂತರ ಬೃಹತ್ ಗಾತ್ರದಲ್ಲಿ ಬಟಗೇರಾದ ವಿದ್ಯುತ್ ಪರಿವರ್ತಿಕಗಳಿಗೆ ಬೆಂಕಿ ತಗುಲಿರುವುದು ಕಂಡು ಬಂದಿದೆ. ಭಾರೀ ಮಳೆಯ ನಡುವೆಯೂ ನಿರಂತರ 40 ನಿಮಿಷಗಳ ಕಾಲ ಬೆಂಕಿ ಹೊತ್ತಿ ಉರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಳಕಾಲೆತ್ತರಕ್ಕೆ ನೀರು ಜಮಾವಣೆಯಾಗಿದ್ದು, ಠಾಣೆಯಲ್ಲಿನ ಪೀಠೋಪಕರಣ, ದಸ್ತಾವೇಜುಗಳನ್ನು ಕಾಪಾಡಲು ಪೊಲೀಸರು ಹರಸಾಹಸ ಪಡುತ್ತಿರುವ ದೃಶ್ಯ ಕಂಡುಬಂದಿದೆ. ಅಲ್ಲದೆ ದೊಡ್ಡ ಅಗಸಿ, ವೆಂಕಟೇಶ್ವರ ನಗರ, ವಿದ್ಯಾನಗರ, ಗಣೇಶ ನಗರ, ಸಣ್ಣ ಅಗಸಿ, ಕೋಡ್ಲಾ ಕ್ರಾಸ್, ಅಗ್ಗಿ ಬಸವೇಶ್ವರ ಕಾಲೊನಿ, ಚೋಟಿಗಿರಣಿ ಬಡಾವಣೆಗಳ ರಸ್ತೆಗಳಲ್ಲಿ ನೀರು ನಿಂತಿದೆ.

Comments

Leave a Reply

Your email address will not be published. Required fields are marked *