ಕಲಬುರಗಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ: ಡಿಸಿ

ಕಲಬುರಗಿ: ಜಿಲ್ಲೆಯಲ್ಲಿ ಭಾರೀ ಮಳೆ ಉಂಟಾಗುವ ಸಂಭವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಜುಲೈ 8 ರಿಂದ 15 ರವರೆಗೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಕೈಗೊಂಡಿರುವ ಮುನ್ನೆಚರಿಕೆ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯಲ್ಲಿ ಈಗಾಗಲೇ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ನದಿಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಹಳ್ಳಿಗಳಲ್ಲಿ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಬೇಕು. ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟುಹೋಗದೆ, ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸೂಚಿಸಿದ್ದಾರೆ.

ಪ್ರವಾಹಕ್ಕೀಡಾಗುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ತೆರೆದು ಸೂಕ್ತ ಊಟ, ವಸತಿ, ವಿದ್ಯುತ್, ನೀರಿನ ಸೌಲಭ್ಯ ಒದಗಿಸಬೇಕು. ಮಕ್ಕಳಿಗೆ ಹಾಲು ಹಾಗೂ ಬಿಸ್ಕೆಟ್ ನೀಡಬೇಕು. ಹಾಲು ಪೂರೈಕೆಯಲ್ಲಿ ವಿಳಂಬವಾದರೆ ಹಾಲಿನ ಪೌಡರ್ ವ್ಯವಸ್ಥೆ ಸಹ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಎಲ್ಲ ಗರ್ಭಿಣಿ ಸ್ತ್ರೀಯರ ಪಟ್ಟಿಯನ್ನು ಅಂಗನವಾಡಿ ಕಾರ್ಯಕರ್ತರಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಗ್ರಾಮಗಳಲ್ಲಿರುವ ಸಣ್ಣ-ಪುಟ್ಟ ನಾಲೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಬ್ಯಾರೇಜ್‍ಗಳ ಎಲ್ಲ ಗೇಟ್ ಗಳು ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಮಾಹಿತಿ ಅರಿಯಬೇಕು. ಪ್ರತಿ ತಾಲೂಕಿನಲ್ಲಿಯೂ ಒಂದೊಂದು ಜೆಸಿಬಿ ವಾಹನವನ್ನು ಸನ್ನದ್ಧವಾಗಿರಿಸಿರಬೇಕು. ಒಂದು ವೇಳೆ ಪ್ರವಾಹ ಪರಿಸ್ಥಿತಿ ಉಂಟಾದರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್, ವಿದ್ಯುತ್ ಸೇರಿದಂತೆ ಅತ್ಯಾವಶ್ಯಕ ಸೌಕರ್ಯಗಳನ್ನು ತಕ್ಷಣಕ್ಕೆ ಕಲ್ಪಿಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

ತಾಲೂಕು ಆಸ್ಪತ್ರೆಗಳಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜನರೇಟರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರೀಕ್ಷಿಸಿ, ಜನರೇಟರಗೆ ಅಗತ್ಯವಿರುವಷ್ಟು ಇಂಧನ ವ್ಯವಸ್ಥೆ ಮಾಡಬೇಕು. ಹಾಗೆಯೇ ಪ್ರಥಮ ಚಿಕೆತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಡಿಹೆಚ್‍ಓ ಅವರಿಗೆ ತಿಳಿಸಿದ್ದಾರೆ.

ತಾಲೂಕು ಮಟ್ಟ ಹಾಗೂ ಪ್ರತಿ ಹಳ್ಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್‍ಗಳೊಂದಿಗೆ ಈ ನೋಡಲ್ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಬೇಕು. ಸಹಾಯಕ ಆಯುಕ್ತರು, ತಹಸೀಲ್ದಾರರು ಸೇರಿ ಜೆಸ್ಕಾಂ, ಪೆÇಲೀಸ್, ಅಗ್ನಿಶಾಮಕ ಇಲಾಖೆಯ ಮುಂತಾದ ಇಲಾಖೆಗಳು ಪರಿಸ್ಥಿತಿಗೆ ಅನುಗುಣವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

Comments

Leave a Reply

Your email address will not be published. Required fields are marked *