ಕಲಬುರಗಿಯಲ್ಲಿಂದು ಎಂಟು ಜನರಿಗೆ ಕೊರೊನಾ ಸೋಂಕು

ಕಲಬುರಗಿ: ಜಿಲ್ಲೆಯಲ್ಲಿ ಶನಿವಾರ ಮತ್ತೆ ಎಂಟು ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 94ಕ್ಕೆ ಏರಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ರೋಗಿ ಸಂಖ್ಯೆ-848 ಸಂಪರ್ಕದಲ್ಲಿ ಬಂದ ಮೋಮಿನಪುರ ಪ್ರದೇಶದ 33 ವರ್ಷದ ಯುವತಿ (ರೋಗಿ-1080), 15 ವರ್ಷದ ಬಾಲಕಿ (ರೋಗಿ-1081), 14 ವರ್ಷದ ಬಾಲಕಿ (ರೋಗಿ-1082), 55 ವರ್ಷದ ಮಹಿಳೆ (ರೋಗಿ-1083), 60 ವರ್ಷದ ಪುರುಷ (ರೋಗಿ-1086) ಹಾಗೂ 10 ವರ್ಷದ ಬಾಲಕಿ (ರೋಗಿ-1087) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಹುಮನಾಬಾದ ಬೇಸ್-ಮೋಮಿನಪುರ ಕಂಟೈನ್‍ಮೆಂಟ್ ಝೋನ್ ಪ್ರದೇಶದಲ್ಲಿ ಕಳೆದ ಮೇ-11 ರಂದು ಕೊರೊನಾ ಸೋಂಕಿನಿಂದ ಮೃತ ವ್ಯಕ್ತಿಯ ಸಂಪರ್ಕದಲ್ಲಿ ಬಂದ ಇದೇ ಪ್ರದೇಶದ 50 ವರ್ಷದ ಮಹಿಳೆಗೂ (ರೋಗಿ-1085) ಕೋವಿಡ್-19 ಸೋಂಕು ತಗುಲಿದೆ.

ಇದಲ್ಲದೆ ಇತ್ತೀಚೆಗೆ ಮುಂಬೈನಿಂದ ವಲಸೆ ಬಂದು ಚಿತ್ತಾಪುರದ ನಾಗಾವಿ ಬಳಿಯ ಮೋರಾರ್ಜಿ ದೇಸಾಯಿ ವಸತಿಯ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿದ್ದ ಚಿತ್ತಾಪುರ ತಾಲೂಕಿನ ಬೆಳಗೇರಾ ತಾಂಡಾ ಮೂಲದ 30 ವರ್ಷದ ಮಹಿಳೆಗೂ ಕೊರೊನಾ ಸೋಂಕು ದೃಢವಾಗಿದೆ. ಇವರನ್ನು ಈಗಾಗಲೇ ಕ್ವಾರಂಟೈನ್ ಕೇಂದ್ರದಿಂದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪೀಡಿತ 94 ರೋಗಿಗಳಲ್ಲಿ 7 ಜನ ನಿಧನರಾಗಿದ್ದು, 47 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ 40 ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *