ಕಲಬುರಗಿಗೆ ತಬ್ಲಿಘಿ ಬಳಿಕ ಧಾರಾವಿ ಕಂಟಕ

– ಧಾರಾವಿ ಸ್ಲಂನಿಂದ ಬಂದ ನಾಲ್ವರಿಗೆ ಕೊರೊನಾ

ಕಲಬುರಗಿ: ಇಷ್ಟು ದಿನ ತಬ್ಲಿಘಿಗಳ ಸೋಂಕಿನಿಂದ ನರಳಿದ ಕಲಬುರಗಿ ಜಿಲ್ಲೆಗೆ ಇದೀಗ ಮುಂಬೈನ ಧಾರಾವಿ ಸ್ಲಂ ಪ್ರದೇಶ ಕಂಟಕವಾಗಿದ್ದು, ಬುಧವಾರ ದಾಖಲಾದ 8 ಪ್ರಕರಣಗಳಲ್ಲಿ 4 ಜನರಲ್ಲಿ ಮುಂಬೈ ವಲಸಿಗ ಕಾರ್ಮಿಕನಿಂದಲೇ ಬಂದಿದೆ. ಅದರಲ್ಲೂ ಜಿಲ್ಲೆಗೆ 10 ಸಾವಿರಕ್ಕೂ ಹೆಚ್ಚು ವಲಸಿಗ ಕಾರ್ಮಿಕರು ಬಂದಿದ್ದಾರೆ.

ಇಡೀ ದೇಶದಲ್ಲಿ ಕೊರೊನಾದಿಂದ ಅತಿ ಹೆಚ್ಚು ನಲುಗಿದ ರಾಜ್ಯ ಅಂದರೆ ಅದು ಮಹಾರಾಷ್ಟ್ರ. ಮುಂಬೈನ ಧಾರಾವಿಯಲ್ಲಿ ನೆಲೆಸಿದ್ದ ಕಲಬುರಗಿ ಮೂಲದ 10 ಸಾವಿರಕ್ಕೂ ಹೆಚ್ಚು ವಲಸಿಗರು ರೈಲು, ಬಸ್ ಮೂಲಕ ಊರಿಗೆ ಬಂದು ಕ್ವಾರಂಟೈನ್‍ನಲ್ಲಿದ್ದಾರೆ. ಅಷ್ಟೇ ಅಲ್ಲದೇ ಸಾವಿರಾರು ಜನ ಕಳ್ಳದಾರಿಲಿ ನುಸುಳಿ ವಿವಿಧ ಗ್ರಾಮಗಳಲ್ಲಿ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಹೀಗೆ ಕಳ್ಳ ಮಾರ್ಗದಿಂದ ಬಂದ 30 ವರ್ಷದ ಯುವಕನಿಗೆ ಕೊರೊನಾ ಬಂದಿತ್ತು. ಈಗ ಆತನ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ತಗುಲಿದೆ. ಇಂಥಾ ಸ್ಥಿತಿಯಲ್ಲಿ ಮುಂಬೈ-ಪುಣೆಯಿಂದ ಮತ್ತೆ 10 ಸಾವಿರಕ್ಕೂ ಹೆಚ್ಚು ವಲಸಿಗರನ್ನು ಕರೆತರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬಟ್ಟೆ ವ್ಯಾಪಾರಿ ಸಂಪರ್ಕ:
ಇತ್ತ ತಬ್ಲಿಘಿಗಳ ಸಂಪರ್ಕದಿಂದ ಏಪ್ರಿಲ್ 7ರಂದು ಮೃತಪಟ್ಟ ಕೇಸ್ ನಂಬರ್ 205ರ 57 ವರ್ಷದ ಬಟ್ಟೆ ವ್ಯಾಪಾರಿಯ ಚೈನ್‍ಲಿಂಕ್ ಸಹ ಬೆಳೆಯುತ್ತಿದೆ. ಬಟ್ಟೆ ವ್ಯಾಪಾರಿ ಇರುವ ಮೋಮ್ಮಿನಪುರ ಬಡಾವಣೆಯಲ್ಲಿಯೇ 35 ಜನರಿಗೆ ಸೋಂಕು ತಗುಲಿದೆ. ಹೀಗಾಗಿ ಈ ಚೈನ್ ಲಿಂಕ್ ಹೇಗೆ ಕಟ್ ಮಾಡಬೇಕು ಅನ್ನೋದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಇನ್ನೂ ನಿನ್ನೆ ಕೊರೊನಾಗೆ ಬಲಿಯಾದ 60 ವರ್ಷದ ವೃದ್ಧ ಸಹ ಇದೇ ಬಟ್ಟೆ ವ್ಯಾಪಾರಿಯ ಸಂಪರ್ಕದಲ್ಲಿ ಇದ್ದವರೇ ಆಗಿದ್ದಾರೆ.

ಸದ್ಯ ಕಲಬುರಗಿಯಲ್ಲಿ ಒಟ್ಟು 81 ಕೊರೊನಾ ಪ್ರಕರಣ ದಾಖಲಾಗಿದ್ದು, ಏಳು ಜನ ಸಾವನ್ನಪ್ಪಿದ್ದಾರೆ. ಇಷ್ಟು ದಿನ ತಬ್ಲಿಘಿಯಿಂದ ಕಂಗೆಟ್ಟ ಜಿಲ್ಲೆಗೆ ಇದೀಗ ಮುಂಬೈ ಧಾರಾವಿ ನಂಟು ನಿದ್ದೆಗೆಡಿಸಿದೆ.

Comments

Leave a Reply

Your email address will not be published. Required fields are marked *