ಕರ್ಫ್ಯೂ ತೆಗೆಯಿರಿ, ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ

– ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿದ್ದ ಮುಸ್ಲಿಮ್‌ ಮುಖಂಡರು
– ಆಯುಕ್ತರಿಗೆ ನೀಡಿದ್ದು ಮನವಿಯೇ? ಅಥವಾ ಎಚ್ಚರಿಕೆಯೇ?

ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಭೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಶಾಂತಿನಗರದ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಜೊತೆ ಮೌಲ್ವಿಗಳು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಈ ವೇಳೆ ಮೌಲ್ವಿಗಳು ಆರೋಪಿಗಳ ಪರವಾಗಿ ಆಯುಕ್ತರ ಬಳಿ ಮನವಿ ಮಾಡಿದ್ದಾರೋ ಎಚ್ಚರಿಕೆ ನೀಡಿದ್ದಾರೋ ಎಂಬ ಪ್ರಶ್ನೆ ಎದ್ದಿದೆ.

ಹೌದು, ಈ ಪ್ರಶ್ನೆ ಏಳಲು ಕಾರಣ ಪಬ್ಲಿಕ್‌ ಟಿವಿಗೆ ಒಂದು ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಕರ್ಫ್ಯೂ ಬಗ್ಗೆ ಉಲ್ಲೇಖಿಸಿ, ಅಲ್ಲಿ ವಿಧಿಸಿರುವ ಕರ್ಫ್ಯೂ ತೆಗೆಯಿರಿ. ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಪೊಲೀಸರು ಚೆನ್ನಾಗಿ ಕೆಲಸ ಮಾಡ್ತಾ ಇದ್ದಾರೆ ಅನ್ನೋ ಮೆಸೇಜ್ ನಾವು ಕಳೆದ ಶುಕ್ರವಾರ ಎಲ್ಲರಿಗೂ ಕಳಿಸಿದ್ದೇವೆ. ನಮ್ಮ ಸಂಘಟನೆಗಳು 28 ಜಿಲ್ಲೆಗಳಲ್ಲಿದ್ದು, ನಾವು ಎಲ್ಲಿಯೂ ಪ್ರತಿಭಟನೆ ಮಾಡಿಲ್ಲ. ಇನ್ನೆರಡು ದಿನಗಳಲ್ಲಿ ಶುಕ್ರವಾರ ಬರಲಿದೆ. ಎರಡು ವಾರ ಅಲ್ಲಿ ಹೇಗೆ ಕರ್ಫ್ಯೂ ಮಾಡ್ತಾರೆ ಅಂತ ಜನ ನಮ್ಮನ್ನ ಕೇಳ್ತಾ ಇದ್ದಾರೆ. ಜನ ಭಯಭೀತರಾಗಿದ್ದಾರೆ. ಶುಕ್ರವಾರದ ಪ್ರಾರ್ಥನೆಯಲ್ಲಿ ಗಲಾಟೆಯ ಬಗ್ಗೆ ಯಾವುದೇ ಚರ್ಚೆಗಳು ನಡೆಯಲ್ಲ. ಹಾಕಿರೋ ಕರ್ಫ್ಯೂ ತೆಗೆಯಿರಿ ಅಂತ ನಾವು ಮನವಿ ಮಾಡಿಕೊಳ್ಳುತ್ತೇವೆ.

ನಾವು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲಿಯ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ನಾವು ಸಂಪೂರ್ಣ ಸಹಕಾರ ನೀಡ್ತೀವಿ. ಸಹಜ ಸ್ಥಿತಿಗೆ ತರಲು ನೀವು ಹೇಳಿದ ಹಾಗೆ ನಾವು ಕೇಳಲು ರೆಡಿ. ಎಲ್ಲರೂ ಒಂದಾಗಿ ಅಲ್ಲಿಯ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವಂತೆ ಮಾಡೋಣ. ಆದ್ರೆ ಅಲ್ಲಿ ವಿಧಿಸಿರುವ ಕರ್ಫ್ಯೂ ತೆಗೆಯಿರಿ. ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದ್ರೆ ನಾವು ಜವಾಬ್ದಾರರಲ್ಲ. ನಿನ್ನೆ ಬಾಣಸವಾಡಿಯಲ್ಲಿ 16 ಜನರನ್ನ ಬಂಧಿಸಿದ್ದಾರೆ. ಅವರಿಗೂ ಈ ಪ್ರಕರಣಕ್ಕೆ ಏನು ಸಂಬಂಧ? ಬಂಧಿತರ ಪೋಷಕರು ನಮ್ಮ ಮಕ್ಕಳು ಅಮಾಯಕರು, ಅಪ್ರಾಪ್ತರು ಅಂತಾ ಹೇಳ್ತಾರೆ.

ಅಮಾಯಕರನ್ನ ಅರೆಸ್ಟ್ ಮಾಡಬಾರದು, ಪೋಷಕರು ಸ್ಟೇಷನ್‍ಗೆ ಹೋದ್ರೆ ಪೊಲೀಸರು ನಾವು ಅರೆಸ್ಟ್ ಮಾಡಿಲ್ಲ ಅಂತಾರೆ, ಬೇರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅಂತಾರೆ. ಪೊಲೀಸರು ಹೀಗೆ ಹೇಳಿದ್ರೆ ಏನು ಮಾಡೋದು, ಕಾನೂನಿನಲ್ಲಿ ಹೀಗಿದೆಯಾ? ಯಾರೋ ಬಂದು ಅರೆಸ್ಟ್ ಮಾಡ್ತಾರೆ ಅಂದ್ರೆ ಹೇಗೆ? ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲಿ ಅರೆಸ್ಟ್ ಆಯ್ತು ಅನ್ನೋದರ ಬಗ್ಗೆ ಅಪ್ಡೇಟ್ ಮಾಡಲಾಗ್ತಿದೆ.

Comments

Leave a Reply

Your email address will not be published. Required fields are marked *