ಕರ್ನೂಲಿನ 27 ವಿದ್ಯಾರ್ಥಿಗಳಿಗೆ ಸೋಂಕು – 4 ಶಾಲೆಗಳು ಬಂದ್‌

ಕರ್ನೂಲ್‌: ಆಂಧ್ರದ ಕರ್ನೂಲಿನ 27 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ 4 ಖಾಸಗಿ ಶಾಲೆಗಳನ್ನು 10 ದಿನ ಬಂದ್‌ ಮಾಡಲಾಗಿದೆ.

ಶ್ರಿಶೈಲಂ ಮಂಡಲದ ಸುನ್ನಿಪೆಂಟಾ ಪ್ರದೇಶದ 4 ಶಾಲೆಗಳ 9-10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ 10 ದಿನ ಶಾಲೆಯನ್ನು ಮುಚ್ಚಿ ಸ್ಯಾನಿಟೈಸ್‌ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಪ್ರಕಟಿಸಿದ್ದಾರೆ.

ವಿದ್ಯಾರ್ಥಿಗಳು ಅಟೋ ರಿಕ್ಷಾದಲ್ಲಿ ಶಾಲೆಗೆ ಆಗಮಿಸುವ ವೇಳೆ ಸೋಂಕು ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 4 ಶಾಲೆಗಳ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಲಾಗಿದೆ.

ಈ ಬಗ್ಗೆ ಕರ್ನೂಲ್‌ ಜಿಲ್ಲಾ ಶಿಕ್ಷಣ ಅಧಿಕಾರಿ ಸಾಯಿರಾಮ್‌ ಪ್ರತಿಕ್ರಿಯಿಸಿ, ಪೋಷಕರ ಒಪ್ಪಿಗೆಯ ಹಿನ್ನೆಲೆಯಲ್ಲಿ ಪ್ರೌಢಶಾಲೆ ಮತ್ತು ಕಾಲೇಜುಗಳ 25 -30 ಸಾವಿರ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಕೋವಿಡ್‌ 19 ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಅನ್‌ಲಾಕ್‌ ಮಾರ್ಗಸೂಚಿಯಂತೆ ಆಂಧ್ರ ಪ್ರದೇಶದಲ್ಲಿ 9, 10, ಪದವಿ ಪೂರ್ವ ತರಗತಿಗಳು ಸೆ. 21ರಿಂದ ಆರಂಭಗೊಂಡಿತ್ತು.

Comments

Leave a Reply

Your email address will not be published. Required fields are marked *