ಕರುನಾಡಿನಲ್ಲಿಯೇ ಕನ್ನಡಕ್ಕೆ ಅಪಮಾನ – ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ

ಬೆಳಗಾವಿ: ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಿ ಮರಾಠಿಗೆ ಮಣೆ ಹಾಕಲಾಗಿದೆ.

ಒಂದೆಡೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿ ಗಡಿ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ. ಮತ್ತೊಂದೆಡೆ ಇದೀಗ ಕರ್ನಾಟಕದ ಸಚಿವರು ಮರಾಠಿ ಪ್ರೇಮ ಮೆರೆದಿದ್ದಾರೆ. ಇಂದು ಬೆಳಗಾವಿಯ ನಿಪ್ಪಾಣಿ ನಗರದಲ್ಲಿನ ತಾಯಿ-ಮಗು ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಆರೋಗ್ಯ ಸಚಿವ ಸುಧಾಕರ್ ಆಗಮಿಸಿದ್ದರು.

ಬೆಳಗಾವಿ ಸಚಿವೆ ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿಯೇ ಈ ಕಾರ್ಯಕ್ರಮ ನಡೆಸಲಾಗಿದ್ದು, ಸ್ವಾಗತ ಕೋರುವುದರಿಂದ ಹಿಡಿದು ಬಹುತೇಕ ಭಾಷಣ ಮರಾಠಿ ಭಾಷೆಯಲ್ಲಿಯೇ ನಡೆಸಿದರು. ಜೊತೆಗೆ ಅಲ್ಲಿನ ಆಯೋಜಕರು ಸ್ವಾಗತ ಗೀತೆಯನ್ನು ಕೂಡ ಮರಾಠಿ ಭಾಷೆಯಲ್ಲಿಯೇ ಹಾಡಿಸಿದ್ದಾರೆ. ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿಯೇ ಕನ್ನಡ ಭಾಷೆಯನ್ನು ಬಳಸದೇ ಮರಾಠಿ ಭಾಷೆಗೆ ಆದ್ಯತೆ ನೀಡಿದ್ದರಿಂದ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾನುವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕರ್ನಾಟಕ ಆಕ್ರಮಿತ ಕೆಲ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕುರಿತಂತೆ ರಾಜ್ಯಾದ್ಯಂತ ಕನ್ನಡಿಗರು ಕಿಡಿಕಾರುತ್ತಿದ್ದಾರೆ. ಈ ನಡುವೆ ಇಂದು ನಡೆದ ಬೆಳಗಾವಿ ಸರ್ಕಾರಿ ಕಾರ್ಯಕ್ರದಲ್ಲಿ ಮರಾಠಿ ಭಾಷೆ ಬಳಸಿರುವುದು ಕನ್ನಡಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.

Comments

Leave a Reply

Your email address will not be published. Required fields are marked *