ಕಮಲ್ ಹಾಸನ್‍ಗೆ ಬಿಗ್ ಶಾಕ್- ಪಕ್ಷದ ಹಿರಿಯ ಮುಖಂಡ ಬಿಜೆಪಿಗೆ ಸೇರ್ಪಡೆ

ಚೆನ್ನೈ: 2021ರ ವಿಧಾನಸಭಾ ಚುನಾವಣೆಗೆ ತಮಿಳುನಾಡಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಮಕ್ಕಳ್ ನೀಧಿ ಮೈಯ್ಯಮ್(ಎಂಎನ್‍ಎಂ)ನ ಹಿರಿಯ ಮುಖಂಡ ಪಕ್ಷ ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುವುದರೊಂದಿಗೆ ಕಮಲ್ ಹಾಸನ್‍ಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಕಮಲ್ ಹಾಸನ್‍ಗೆ ಇದು ದೊಡ್ಡ ಹೊಡೆತ ಬಿದ್ದಂತಾಗಿದೆ. ಎಂಎನ್‍ಎಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಎ ಅರುಣಾಚಲಂ ಅವರು ಬಿಜೆಪಿಯ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ನೇತೃತ್ವದಲ್ಲಿ ಚೆನ್ನೈನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರಿದರು.

ಅರುಣಾಚಲಂ ಅವರು ತುಕಿಕೋರಿನ್ ಹಳ್ಳಿಯವರಾಗಿದ್ದು, ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಎಂಎನ್‍ಎಂ ಪಕ್ಷಕ್ಕೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂದಿನ ವರ್ಷ ಏಪ್ರಿಲ್- ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಮಲ್ ಹಾಸನ್ ಅವರ ಎಂಎನ್‍ಎಂ ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧಿಸಲು ತಯಾರಿ ಮಾಡುತ್ತಿರುವಾಗಲೇ ಪಕ್ಷ ತೊರೆದಿರುವುದು ಕಮಲ್ ಹಾಸನ್ ಗೆ ಭಾರೀ ಹೊಡೆತ ಬಿದ್ದಂತಾಗಿದೆ.

ನಟನಾಗಿ ನಂತರ ರಾಜಕೀಯಕ್ಕೆ ತಿರುಗಿದ್ದ ಕಮಲ್ ಹಾಸನ್, ಚುನಾವಣೆಯ ಸಂದರ್ಭ ಪಕ್ಷದಿಂದ ದೂರ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಮಲ್ ಹಾಸನ್ ಈ ತಿಂಗಳ ಆರಂಭದಲ್ಲಿ ಪ್ರಚಾರದಲ್ಲಿ ತೊಡಗಿದ್ದರು.

ಜನವರಿಯಲ್ಲಿ ಪಕ್ಷ ಸ್ಥಾಪಿಸಲಿರುವ ರಜನಿಕಾಂತ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಕ್ತನಾಗಿದ್ದೇನೆಂದಿರುವ ಕಮಲ್, ಇತ್ತಿಚೇಗೆ ಎಂಎನ್‍ಎಂ ಪಕ್ಷ ತಮಿಳುನಾಡಿನಲ್ಲಿ 7 ಅಂಶಗಳ ಆಡಳಿತ ಯೋಜನೆಯನ್ನು ಬಿಡುಗಡೆ ಮಾಡಿತ್ತು. 7 ಅಂಶಗಳ ಆಡಳಿತ ಮತ್ತು ಆರ್ಥಿಕ ಕಾರ್ಯಸೂಚಿಯಲ್ಲಿ ಪ್ರಮುಖವಾಗಿ ಗ್ರೀನ್ ಚಾನೆಲ್ ಸರ್ಕಾರ, ಆನ್‍ಲೈನ್ ಹೋಮ್ಸ್, ಗ್ರಾಮೀಣ ಪ್ರದೇಶದಲ್ಲಿ ನಗರ ಅವಕಾಶವನ್ನು ಒದಗಿಸುವುದು, ಮಹಿಳಾ ಪುಷ್ಟೀಕರಣ ಮುಂತಾದ ಯೋಜನೆಗಳೂ ಸೇರಿವೆ.

ಮಹಿಳಾ ಮತದಾರರನ್ನು ಸೆಳೆಯಲು, ಮನೆಯಲ್ಲಿ ಕೆಲಸ ಮಾಡುವ ಮನೆಕೆಲಸಗಾರರಿಗೆ ವೇತನ, ಎಲ್ಲಾ ಮನೆಗಳಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಹೊಂದಿರುವ ಕಂಪ್ಯೂಟರ್ ಮತ್ತು ರೈತರನ್ನು ಕೃಷಿ ಉದ್ಯಮಿಗಳಾಗಿ ಪರಿವರ್ತಿಸುದಾಗಿ ಭರವಸೆ ನೀಡಿದರು. ಇದರೊಂದಿಗೆ ಮರಳು ಗಣಿಗಾರಿಕೆಯನ್ನು ಕೊನೆಗೊಳಿಸುವುದಾಗಿ ಮತ್ತು ನದಿಗಳಿಗೆ ಪುನಶ್ಚೇತನ ಕೊಡಿಸುವುದಾಗಿಯು ಆಶ್ವಾಸನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *