ಕಬ್ಬಿಣ ಕಳ್ಳನಿಗೆ ಕೊರೊನಾ ಪಾಸಿಟಿವ್- ಬೆಂಗ್ಳೂರಿನ 15 ಪೊಲೀಸರು ಕ್ವಾರಂಟೈನ್

ಬೆಂಗಳೂರು: ಕಬ್ಬಿಣ ಕಳ್ಳನಿಗೆ ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದ್ದು ಬೆಂಗಳೂರಿನ ಪೊಲೀಸರಿಗೆ ಆತಂಕ ಶುರುವಾಗಿದೆ.

ಆರೋಪಿಯು ಪಾದರಾಯನಪುರ ನಿವಾಸಿಯಾಗಿದ್ದು, ಕೊರೊನಾ ದೃಢಪಡುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಹೆಬ್ಬಗೋಡಿ ಠಾಣೆಯ 15 ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.

ಆರೋಪಿಯು ಬಿಬಿಎಂಪಿಯ ಓರ್ವ ಕಾರ್ಪೋರೇಟರ್ ಸಂಬಂಧಿ ಎನ್ನಲಾಗಿದ್ದು, ಮೇ 17ರಂದು ಕಬ್ಬಿಣ ಕಳ್ಳತನ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಆತನನ್ನು ಹಿಡಿದು ಸ್ಥಳೀಯರು ಥಳಿಸಿದ್ದರು. ಬಳಿಕ ಹೆಬ್ಬಗೋಡಿ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಕಳ್ಳನನ್ನ ಸೋಮವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ಬಳಿಕ ಆತ ಪಾದರಾಯನಪುರದ ನಿವಾಸಿ ಎನ್ನುವುದು ತಿಳಿಯುತ್ತಿದ್ದಂತೆ ಜೈಲಿಗಟ್ಟುವ ಮುನ್ನ ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು.

ಕಳ್ಳನ ಕೊರೊನಾ ಟೆಸ್ಟ್ ರಿಪೋರ್ಟ್ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಆರೋಗ್ಯಾಧಿಕಾರಿಗಳು ಹೆಬ್ಬಗೋಡಿ ಠಾಣೆಯ 15 ಪೊಲೀಸರನ್ನು ಕ್ವಾರಂಟೈನ್‍ನಲ್ಲಿ ಇರಿಸಿದ್ದಾರೆ. ಜೊತೆಗೆ ಠಾಣೆಯಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ.

ಇತ್ತ ಆತನನ್ನು ಥಳಿಸಿದ ಜನರನ್ನು ಕೂಡ ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಿಗೂ ಕಳ್ಳನಿಂದ ಆತಂಕ ಶುರುವಾಗಿದೆ.

Comments

Leave a Reply

Your email address will not be published. Required fields are marked *