ಕಡಿಮೆ ಬಂಡವಾಳದಲ್ಲಿ ಆರಂಭ- ಇದೀಗ ಲಕ್ಷ ಲಕ್ಷ ಆದಾಯ

– ಕಡಿಮೆ ಶ್ರಮ, ಸಮಯದಲ್ಲಿ ಹೆಚ್ಚೆಚ್ಚು ಆದಾಯ

ಕೋಲಾರ: ಕಡಿಮೆ ಬಂಡವಾಳ ಹಾಕಿ ಕೋಳಿ ಮತ್ತು ನಾಯಿ ಸಾಕಾಣಿಕೆ ಆರಂಭಿಸಿದ್ದ ಕೋಲಾರದ ಯುವಕರು ಇಂದು ಲಕ್ಷ ಲಕ್ಷ ಆದಾಯ ಸಂಪಾದಿಸುತ್ತಿದ್ದಾರೆ. ಅತಿ ಕಡಿಮೆ ಶ್ರಮ ವಹಿಸಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಪಡೆದುಕೊಳ್ಳುತ್ತಿದ್ದಾರೆ.

ವೆಂಕಟೇಶ್, ಮಂಜುನಾಥ್ ಮತ್ತು ವೆಂಕಟರಮಣ ಹೊಸ ಉದ್ಯಮಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಕೋಲಾರ ನಗರದ ಅಂತರಗಂಗೆ ಬೆಟ್ಟದ ತಪ್ಪಲ್ಲಿನಲ್ಲಿ ಫಾರ್ಮ್ ಮಾಡಿಕೊಂಡಿರುವ ಮೂವರು ಸಣ್ಣ ಜಮೀನಿನಲ್ಲಿ ವಿಶಿಷ್ಟ, ವಿವಿಧ ತಳಿಯ ಕೋಳಿಗಳು, ನಾನಾ ಜಾತಿಯ ದುಬಾರಿ ನಾಯಿಗಳನ್ನು ಸಾಕಿದ್ದಾರೆ. ಹೊರ ರಾಜ್ಯದ ವಿಶೇಷ ತಳಿಯ ನಾಟಿ ಕೋಳಿಗಳನ್ನ ಸಾಕಾಣಿಕೆ ಆರಂಭ ಮಾಡಿ, ರಾಜ್ಯದಲ್ಲೆ ಸಿಗದ ಆಂಧ್ರ ಪ್ರದೇಶದ ಭೀಮಾವರದ ಕೋಳಿಗಳನ್ನ ಸಾಕಾಣಿಕೆ ಮಾಡಿ ಗಮನ ಸೆಳೆದಿದ್ದಾರೆ.

ಈ ಕೋಳಿಗಳ ವಿಶೇಷತೆ ಒಂದು ಮರಿ ಮಾಡಿಸೋದು, ಮತ್ತೊಂದು ಪಂದ್ಯಗಳಿಗೆ ಇವುಗಳನ್ನ ಬಳಸಿಕೊಳ್ಳಲಾಗುತ್ತದೆ. ದೈತ್ಯವಾಗಿರುವ ಕಪ್ಪು ಬಣ್ಣದ, ಗುರಡನಂತೆ ಕಾಣುವ ಒಂದು ಹುಂಜದ ಬೆಲೆ 35 ಸಾವಿರ ರೂಪಾಯಿ, ಇದರಿಂದ ಮರಿಯಾಗಿರುವ ಪುಟ್ಟ ಕೋಳಿ ಮರಿಗಳ ಬೆಲೆ ಐದು ಸಾವಿರ. ಒಂದು ಮೊಟ್ಟೆಯ ಬೆಲೆ 500 ರೂಪಾಯಿ. ರಾಜ್ಯದಲ್ಲಿ ಸಿಗದ ಕೋಳಿಗಳನ್ನ ಬೆಳೆಸುವ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಮಾಡಿದ್ದಾರೆ.

ಕೋಳಿ ಮಾತ್ರವಲ್ಲದೆ ದುಬಾರಿ ಬೆಲೆಯ ವಿವಿಧ ತಳಿಯ ನಾಯಿಗಳನ್ನ ಸಹ ಸಾಕಾಣಿಕೆ ಮಾಡುತ್ತಿದ್ದಾರೆ. ವಿವಿಧ ಬಣ್ಣದ ನಾನಾ ತಳಿಯ ನಾಯಿಗಳು ಕೂಡ ಇಲ್ಲಿ ಸಾಕಾಣಿಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಲವ್ ಬರ್ಡ್ಸ್ , ಪಾರಿವಾಳ, ಕುರಿ ಸಾಕಾಣಿಕೆ ಮಾಡುವ ಯೋಜನೆ ಕೂಡ ಹಾಕಿಕೊಂಡಿದ್ದಾರೆ. ಈಗಾಗಲೇ 50 ಕ್ಕೂ ಹೆಚ್ಚು ನಾಯಿಗಳು, 500ಕ್ಕೂ ಹೆಚ್ಚು ಕೋಳಿಗಳ ಸಂತತಿ ಮಾಡಿರುವ ಯುವಕರು ಇನ್ನೂ ಮಾರಾಟ ಮಾಡುತ್ತಿಲ್ಲ. ಕಾರಣ ತಾವು ಅಂದುಕೊಂಡಿರುವ ಗುರಿ ತಲುಪಿದ ಬಳಿಕ ಮಾರಾಟ ಮಾಡಿ ಆದಾಯ ಮಾಡುವುದು ಇವರ ಉದ್ದೇಶ.

ಭೀಮಾವರಂ ಕೋಳಿ 5-6 ಕೆಜಿಯವರೆಗೆ ಸಾಮಾನ್ಯವಾಗಿ ಬೆಳೆಯುತ್ತವೆ. ಮಾಂಸಕ್ಕಾಗಿ ಮತ್ತು ಕೋಳಿ ಫೈಟಿಂಗ್ ಎರಡಕ್ಕೂ ಸಹ ಈ ಕೋಳಿ ಬಳಕೆಯಾಗುತ್ತದೆ. ಕೋಳಿಗಳಿಗೆ 15 ರಿಂದ 20 ಸಾವಿರದಷ್ಟು ಬೆಲೆ ಇದೆ. ಸದ್ಯ ವೆಂಕಟೇಶ್ ಬಳಿ 20 ಹುಂಜ, 30 ಹ್ಯಾಟೆಗಳಿವೆ. ಪುಟ್ಟ ಬಂಡವಾಳದಿಂದ ಆರಂಭಿಸಿದ ಕೋಳಿ ಕೃಷಿಯಲ್ಲಿ ಈಗ ಸಣ್ಣ ಮರಿಗಳು ಸೇರಿ ಒಟ್ಟು ಐನೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿವೆ.

Comments

Leave a Reply

Your email address will not be published. Required fields are marked *