ಕಚೇರಿಯಲ್ಲಿ ಏಜೆಂಟ್‍ಗಳಿದ್ದರೆ ಜನರಿಗೆ ಹೇಳಿ ಹೊಡೆಸುತ್ತೇನೆ: ಹೆಚ್.ಡಿ.ರೇವಣ್ಣ

-ಶಾಸಕರ ಹೆಸ್ರು ಹೇಳಿ ಹಣ ವಸೂಲಿ ಮಾಡ್ತೀರಾ?

ಹಾಸನ: ನಗರದ ಸಬ್ ರಿಜಿಸ್ಟರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಶಾಕ್ ಕೊಟ್ಟ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಣದ ದಂಧೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಹಾಸನದ ಸಬ್ ರಿಜಿಸ್ಟರ್ ಕಚೇರಿಗೆ ಯಾರಾದರೂ ಜಮೀನು ವಿಚಾರದಲ್ಲಿ ಹೋದರೇ ಹತ್ತು ಲಕ್ಷ ರಿಜಿಸ್ಟರ್ ಗೆ 10 ಸಾವಿರ, 20 ಲಕ್ಷಕ್ಕೆ 20 ಸಾವಿರ ಹಾಗೂ 30 ಲಕ್ಷಕ್ಕೆ 30 ಸಾವಿರ ರೂ ಫಿಕ್ಸ್ ಮಾಡಲಾಗಿದೆ ಎಂದು ರೇವಣ್ಣ ಪ್ರಶ್ನಿಸಿದರು. ಸಾರ್ವಜನಿಕರ ಸಮ್ಮುಖದಲ್ಲಿ ಕೇಳಲಾದ ಪ್ರಶ್ನೆಗೆ ಅಧಿಕಾರಿಗಳು ಉತ್ತರ ನೀಡದೇ ಮೌನವಾಗಿದ್ದರು. ನಾನು ಇಲ್ಲಿಗೆ ಬಂದಾಗ ಏಜೆಂಟ್ ಗಳು ನನ್ನ ಕಣ್ಣಿಗೆ ಏನಾದರೂ ಕಾಣಿಸಿದರೇ ಇಲ್ಲಿರುವ ಜನರಿಂದಲೇ ಓಡಾಡಿಸಿ ಹೊಡೆಯಲು ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಒಂದೊಂದು ನಿವೇಶನಕ್ಕೂ ಬಡ ಜನರಿಂದ ಹಣ ಪಡೆಯುವ ನೀವು ಈ ಹಣವನ್ನು ಶಾಸಕರಿಗೆ ಕೊಡೊದಕ್ಕಾ? ನನ್ನ ವಿಧಾನಸಭಾ ಕ್ಷೇತ್ರದ ಎರಡು ಹೋಬಳಿ ಬರುತ್ತವೆ. ಅವರಿಗೆ ಯಾಕೆ ನೀವು ಕೆಲಸ ಮಾಡಿ ಕೊಡುತ್ತಿಲ್ಲ. ಯಾವ ಶಾಸಕರಿಗೆ ಹಣ ಕೊಡುತ್ತಿದ್ದೀರಾ? ಪ್ರತಿ ತಿಂಗಳು ನಾಲ್ಕು ಲಕ್ಷ ಕೊಡಬೇಕು ಅಂತಾ ಜನರಿಂದ ಹಣ ವಸೂಲಿ ಮಾಡುತ್ತಿದ್ದೀರ. ಸರ್ಕಾರಕ್ಕೆ ಕೊಡಲು ವಸೂಲಿ ಮಾಡುತ್ತಿದ್ದೀರಾ ಅಥವಾ ಬೇರೆ ಯಾರಿಗೆ ಕೊಡಲು ವಸೂಲಿ ಮಾಡುತ್ತಿದ್ದೀರಾ ಹೇಳಿ ಎಂದು ತರಾಟೆಗೆ ತೆಗೆದುಕೊಂಡರು.

ನಿಮ್ಮ ಡ್ರಾಯರ್ ಎಲ್ಲ ತೆಗೆಯಿರಿ ಎಷ್ಟೆಷ್ಟು ಹಣ ಇರಬಹುದು ನೋಡೋಣ ಎಂದು ಅಧಿಕಾರಿಗಳಿಗೆ ಕೇಳಿದಾಗ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಇನ್ನು ರಿಜಿಸ್ಟರ್ ಆಗಿರುವ ಪಟ್ಟಿ ತೋರಿಸಿ, ದಿನಕ್ಕೆ ಎಷ್ಟು ರಿಜಿಸ್ಟರ್ ಮಾಡಲಾಗುತ್ತಿದೆ? ಸಿನಿಯಾರಿಟಿ ಮೇಲೆ ಮಾಡಲಾಗುತ್ತಿದಿಯಾ? ಇಲ್ಲ ಹಣ ಹೆಚ್ಚು ಕೊಟ್ಟವರಿಗೆ ಮೊದಲು ಆಗುತ್ತಿದಿಯಾ ಎಂದು ಆಕ್ರೋಶ ಹೊರಹಾಕಿದರು.

Comments

Leave a Reply

Your email address will not be published. Required fields are marked *