– ಸೌಲಭ್ಯಗಳು ಸಿಗದೇ ಗ್ರಾಮಸ್ಥರು ಕಂಗಾಲು
– ನನಗೇನು ಗೊತ್ತಿಲ್ಲ ಎಂದ ತಹಶೀಲ್ದಾರ್
ಕಾರವಾರ: ಪ್ರತಿ ಬಾರಿ ಸರ್ಕಾರಿ ಕಚೇರಿಗೆ ಅಲೆಯುವ ಜನರಿಗಾಗಿ ಸಕಾಲ ಸೇರಿದಂತೆ ಈ ಡಿಜಿಟಲ್ ಸೇವೆಗಳನ್ನು ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ಅಧಿಕೃತ ದಾಖಲಾತಿ ವೆಬ್‍ಸೈಟ್ ನಲ್ಲಿ ಮಜಿರೆಯೊಂದರ ಹೆಸರೇ ಮಾಯವಾಗಿದೆ. ಈ ಕಾರಣದಿಂದ ಇಲ್ಲಿನ ನಿವಾಸಿಗಳು ಅಗತ್ಯ ದಾಖಲೆಗಳ ಜತೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸೇರಿದಂತೆ ಶಾಲೆ, ಅಂಗನವಾಡಿ, ಹತ್ತಾರು ಅಂಗಡಿಗಳನ್ನು ಹೊಂದಿರುವ ಡಿಪೂಬೈಲ್ ಮಜಿರೆ ಈಗ ಸರ್ಕಾರಿ ಅಧಿಕೃತ ವೆಬ್‍ಸೈಟ್ ನಲ್ಲಿ ಮಾಯವಾಗಿದೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆಯಿದ್ದು, ನೂರಾರು ಜನರು ತಮ್ಮ ನೆಲೆಯನ್ನು ದಾಖಲಿಸಲಾಗದೆ ಹೈರಾಣಾಗಿದ್ದಾರೆ.

ಮಜಿರೆಯೇ ಮಾಯ: ಈ ಗ್ರಾಮದಲ್ಲಿ 35 ಕುಟುಂಬ ಹಾಗೂ 175 ಮತಗಳನ್ನು ಹೊಂದಿರುವ ಈ ಮಜಿರೆ ವರ್ಷದ ಹಿಂದೆ ಸರ್ಕಾರಿ ದಾಖಲೆಯಲ್ಲಿತ್ತು. ಆದರೆ ಏಕಾಏಕಿ ಕಂದಾಯ ಇಲಾಖೆ ವೆಬ್‍ಸೈಟ್ ನಲ್ಲಿ ಮಜಿರೆಯ ಹೆಸರು ನಮೂದಿಸಿದ ಯಾವುದೇ ಫಲಿತಾಂಶ ತೋರಿಸುತ್ತಿಲ್ಲ. ಸಮೀಪದ ಅಮ್ಮಿನಳ್ಳಿ ನೆಮ್ಮದಿ ಕೇಂದ್ರಕ್ಕೆ ತೆರಳಿ ವಾಸ್ತವ್ಯ ಪ್ರಮಾಣಪತ್ರಕ್ಕೆ ಅರ್ಜಿ ನೀಡಿದಾಗ ಡಿಪೂಬೈಲ್ ಮಜರೆ ಇಲ್ಲದಿರುವುದು ಸ್ಥಳೀಯರಿಗೆ ಶಾಕ್ ನೀಡಿದೆ. ಇದರಿಂದ ಮಜಿರೆಯ ನಿವಾಸಿಗಳು ಕಂಗಾಲಾಗಿದ್ದಾರೆ.
ಜಾತಿ, ಆದಾಯ ಪ್ರಮಾಣಪತ್ರ, ಆದಾಯ, ವಂಶಾವಳಿ, ಆಧಾರ್ ಸೇರಿದಂತೆ ಆನ್‍ಲೈನ್ ಮುಖಾಂತರ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಪಡೆಯುವ ಸುಮಾರು 7 ಪ್ರಮಾಣಪತ್ರಗಳಿಗೆ ಮಜಿರೆ ಹೆಸರೇ ನಮೂದಾಗದ ಕಾರಣ ಇಲ್ಲಿನ ಗ್ರಾಮದವರು ತೊಂದರೆ ಎದುರಿಸುತ್ತಿದ್ದಾರೆ. ಇನ್ನು ಪ್ರಮಾಣಪತ್ರ ದೊರೆತರೂ ವಿಳಾಸ ಸರಿಯಾಗಿ ನಮೂದಾಗದೇ ಕೇವಲ ಗ್ರಾಮ ಮಾತ್ರ ಸಿಗಲಿದ್ದು, ಸರ್ಕಾರದ ಯೋಜನೆಗಳನ್ನು ಪಡೆಯಲು ಸಮಸ್ಯೆಯಾಗುತ್ತಿದೆ.

ಸರ್ಕಾರದ ಯೋಜನೆಗಳು ಮರೀಚಿಕೆ: ದೇವನಹಳ್ಳಿ ಗ್ರಾಮದಲ್ಲಿ ಒಟ್ಟು 35 ಮಜರೆಗಳಿದ್ದು, ಅದರಲ್ಲಿ ಡಿಪೂಬೈಲ್ ಸಹ ಒಂದಾಗಿದೆ. ಆದರೆ ಈಗ 24 ಮಜರೆಗಳು ಮಾತ್ರ ಉಲ್ಲೇಖವಾಗಿದ್ದು, ಸರ್ಕಾರಿ ವೆಬ್‍ಸೈಟ್ ನಿಂದ ಡಿಪೂಬೈಲ್ ಮಾಯವಾಗಿದೆ. ಇದರಿಂದ ಈ ಮಜಿರೆಯ ನಿವಾಸಿಗಳು ಸರ್ಕಾರದ ಯಾವ ಯೋಜನೆಗಳಿಗೂ ಅರ್ಹರಲ್ಲ ಎನ್ನುವಂತಾಗಿದ್ದು, ಹೊಸದಾಗಿ ಯಾವ ದಾಖಲೆಗಳು ಬೇಕಿದ್ದರೂ ತೊಂದರೆಪಡುವಂತಾಗಿದೆ.
ಚುನಾವಣೆಗೆ ಸ್ಪರ್ಧಿಸಲು ವಾಸ್ತವ್ಯ ಪ್ರಮಾಣಪತ್ರದ ಅಗತ್ಯವಿದ್ದು, ಪ್ರತಿ ಹಂತದಲ್ಲಿಯೂ ಗ್ರಾಮಸ್ಥರಿಗೆ ಸಮಸ್ಯೆ ಎನ್ನುವಂತಾಗಿದೆ. ಅಧಿಕಾರಿಗಳು ಪಕ್ಕದ ಗ್ರಾಮದಲ್ಲಿನ ವಾಸ್ತವ್ಯ ಪ್ರಮಾಣಪತ್ರ ನೀಡುವುದಾಗಿ ಹೇಳುತ್ತಾರೆ. ಆದರೆ ಆಯಾ ಗ್ರಾಮಸ್ಥರು ತಕರಾರು ಮಾಡಿದಲ್ಲಿ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ನನಗೇನು ಗೊತ್ತಿಲ್ಲ: ಕಳೆದ ಒಂದು ವರ್ಷದಿಂದ ಈ ಗ್ರಾಮ ಕಂದಾಯ ಇಲಾಖೆ ವೆಬ್‍ಸೈಟ್ ನಿಂದ ಮಾಯಾವಾಗಿದೆ. ಈ ಕುರಿತು ಗ್ರಾಮದವರು ಪ್ರತಿಭಟನೆ ನಡೆಸಿ ಶಿರಸಿ ತಹಶೀಲ್ದಾರ್ ಡಾ.ಕುಲಕರ್ಣಿರವರಿಗೆ ಮನವಿ ನೀಡಿ ಸರಿಪಡಿಸುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ತಹಶೀಲ್ದಾರ್ ರವರು ಸ್ವೀಕೃತಿ ಪತ್ರದ ಜೊತೆ ಸಹಿ ಹಾಕಿ ನೀಡಿದ್ದಾರೆ. ಆದ್ರೆ ನಮಗೆ ಈ ಬಗ್ಗೆ ಯಾರು ಮಾಹಿತಿ ನೀಡಿಲ್ಲ ಎಂದು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ ತಿಳಿಸಿದ್ದು ಮೊದಲು ಅರ್ಜಿ ಕೊಡಲಿ ನಂತರ ಸರಿಪಡಿಸುತ್ತೇವೆ ಎಂದು ಅಸಡ್ಡೆ ಮಾಡಿದ್ದಾರೆ.
ಇನ್ನು ಈ ಗ್ರಾಮದವರಿಗೆ ಸದ್ಯ ಸರ್ಕಾರಿ ಸವಲತ್ತುಗಳು ದೂರದ ಬೆಟ್ಟದಂತಾಗಿದ್ದು ಯಾವ ಸೌಲಭ್ಯವೂ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೀಘ್ರವೇ ಆದ ತಪ್ಪನ್ನು ಕಂದಾಯ ಇಲಾಖೆ ಸರಿಪಡಿಸದಿದ್ದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

Leave a Reply