ಕಂಟೈನ್ಮೆಂಟ್ ಝೋನ್‍ದಿಂದ ಬಂದ ಗರ್ಭಿಣಿಯನ್ನು ಅಡ್ಮಿಟ್ ಮಾಡ್ಕೊಳ್ಳಲು ಆಸ್ಪತ್ರೆಗಳು ನಕಾರ

– ನರಳಿ ನರಳಿ ಸಾವನ್ನಪ್ಪಿದ 6 ತಿಂಗಳ ಗರ್ಭಿಣಿ
– ಖಾಸಗಿ ಆಸ್ಪತ್ರೆ ಮುಂದೆಯೇ ಪ್ರಾಣ ಬಿಟ್ಟ ಮಹಿಳೆ

ಲಕ್ನೋ: ಕಂಟೈನ್ಮೆಂಟ್ ಝೋನ್‍ನಿಂದ ಬಂದ ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ 6 ತಿಂಗಳ ಗರ್ಭಿಣಿ ನರಳಿ ನರಳಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಾವನ್ನಪ್ಪಿದ ಗರ್ಭಿಣಿಯನ್ನು 28 ವರ್ಷದ ಅರ್ಷಿ ಎಂದು ಗುರುತಿಸಲಾಗಿದೆ. ಅರ್ಷಿ ಉತ್ತರ ಪ್ರದೇಶದ ಪಿಲಿಭಿತ್‍ನ ಫೀಲ್‍ಖಾನಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆಕೆಯ ಪತಿಯನ್ನು ಶಿರಾಜುದ್ದೀನ್ ಎಂದು ಗುರುತಿಸಲಾಗಿದೆ. ಈ ವಲಸೆ ಕಾರ್ಮಿಕ ದಂಪತಿ ಈ ಪ್ರದೇಶಕ್ಕೆ ಬಂದ ನಂತರ ಅದನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿತ್ತು.

ಆರು ತಿಂಗಳ ಗರ್ಭಿಣಿಯಾಗಿದ್ದ ಅರ್ಷಿ ರಂಜಾನ್ ತಿಂಗಳಲ್ಲಿ ಉಪವಾಸ ಮಾಡಿ ತುಂಬಾ ವೀಕ್ ಆಗಿದ್ದರು. ಈ ಕಾರಣದಿಂದ ಮನೆಯಲ್ಲಿ ಕುಸಿದು ಬಿದ್ದ ಅರ್ಷಿಯನ್ನು ಆಕೆಯ ಗಂಡ ಶಿರಾಜುದ್ದೀನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅವರು ಕಂಟೈನ್ಮೆಂಟ್ ಝೋನ್‍ನಿಂದ ಬಂದ ಕಾರಣ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಾವು ಅಡ್ಮಿಟ್ ಮಾಡಿಕೊಳ್ಳಲ್ಲ, ಚಿಕಿತ್ಸೆ ನೀಡಲ್ಲ ಎಂದು ನಿರಾಕರಿಸಿದ್ದಾರೆ.

ಶಿರಾಜುದ್ದೀನ್ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಆಸ್ಪತ್ರೆಯವರು ಈ ಸಮಯದಲ್ಲಿ ಕಂಟೈನ್ಮೆಂಟ್ ಏರಿಯಾದಿಂದ ಬಂದ ಯಾರಿಗೂ ನಾವು ಚಿಕಿತ್ಸೆ ನೀಡಲ್ಲ ಎಂದು ಹೇಳಿದ್ದಾರೆ. ಜೊತೆಗೆ ನಿಮ್ಮ ಪತ್ನಿಗೆ ಚಿಕಿತ್ಸೆ ಬೇಕು ಎಂದರೆ ಜಿಲ್ಲಾಧಿಕಾರಿಗಳ ಬಳಿ ಪತ್ರವನ್ನು ಬರೆಸಿಕೊಂಡು ಬನ್ನಿ ನಂತರ ನಾವು ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಮೃತಳ ಪತಿ ಶಿರಾಜುದ್ದೀನ್, ನನ್ನ ಹೆಂಡತಿ ಪ್ರಾಣವನ್ನು ಉಳಿಸಿ ಎಂದು ನಾನು ವೈದ್ಯರನ್ನು ಬೇಡಿಕೊಂಡಿದ್ದೆ. ನಾನು ಎಷ್ಟೇ ಬೇಡಿಕೊಂಡರೂ ವೈದ್ಯರ ಮನಸ್ಸು ಕರಗಲಿಲ್ಲ. ಅವರು ನನ್ನ ಪತ್ನಿಯನ್ನು ಮುಟ್ಟಿಕೂಡ ನೋಡಲಿಲ್ಲ. ಆದ್ದರಿಂದ ನನ್ನ ಪತ್ನಿ ಖಾಸಗಿ ಆಸ್ಪತ್ರೆ ಮುಂದೆಯೇ ನರಳಿ ನರಳಿ ಪ್ರಾಣ ಬಿಟ್ಟಳು ಎಂದು ಕಣ್ಣೀರು ಹಾಕಿದ್ದಾರೆ.

ಈ ವಿಚಾರದ ಬಗ್ಗೆ ಖಾಸಗಿ ಆಸ್ಪತ್ರೆ ಮಾಲೀಕರು ಮಾತನಾಡಿ, ಖಾಸಗಿ ಆಸ್ಪತ್ರೆಗಳು ತುಂಬ ಒತ್ತಡದಿಂದ ಕಾರ್ಯನಿರ್ವಹಿಸುತ್ತಿವೆ. ಒಂದು ವೇಳೆ ಕೊರೊನಾ ಸೋಂಕಿತರನ್ನು ನಾವು ಚಿಕಿತ್ಸೆ ಮಾಡಿದರೆ ಜಿಲ್ಲಾಡಳಿತ ನಮ್ಮ ಮೇಲೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಸೀಮಾ ಅಗ್ರವಾಲ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *