ಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ

-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ
-ಮುಂಬೈಗೆ ಬಂದಿಳಿದ ಮಣಿಕರ್ಣಿಕಾ

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮನೆ ಮತ್ತು ಕಚೇರಿ ನೆಲಸಮ ಕಾರ್ಯಕ್ಕೆ ಹೈಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಬಿಎಂಸಿ (ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್) ಇಂದು ಬೆಳಗ್ಗೆಯಿಂದ ನಡೆಸುತ್ತಿರುವ ಕಾರ್ಯಚರಣೆಗೆ ಬ್ರೇಕ್ ಬಿದ್ದಿದೆ. ಗುರುವಾರ ಮಧ್ಯಾಹ್ನ 3 ಗಂಟೆವರೆಗೆ ಯಾವುದೇ ನೆಲಸಮ ಕಾರ್ಯ ನಡೆಯುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ದಿಢೀರ್ ಅಂತಾ ಕಂಗನಾ ರಣಾವತ್ ಮನೆ ಮತ್ತು ಕಚೇರಿ ನೆಲಸಮಕ್ಕೆ ಮುಂದಾಗಿದ್ದೇಕೆ ಎಂದು ಹೈಕೋರ್ಟ್ ಬಿಎಂಸಿಯನ್ನ ಪ್ರಶ್ನೆ ಮಾಡಿದೆ. ಈ ಸಂಬಂಧ ನಾಳೆ ಬಿಎಂಸಿ ನ್ಯಾಯಾಲಯಕ್ಕೆ ಉತ್ತರ ನೀಡಬೇಕಿದೆ. ಬಾಂಬೆ ಹೈಕೋರ್ಟ್ 26 ಮಾರ್ಚ್ 2020ರಂದು ರಾಜ್ಯ ಸರ್ಕಾರ, ಬಿಎಂಸಿ ಮತ್ತು ಸಂಬಂಧಿತ ವಿಭಾಗಗಳು ಯಾರ ವಿರುದ್ಧವೂ ಆತುರದ ನಿರ್ಧಾರಗಳನ್ನ ತೆಗೆದುಕೊಳ್ಳುವಂತಿಲ್ಲ ಎಂದು ಆದೇಶ ನೀಡಿತ್ತು. ಮಾರ್ಚ್ 26ರ ಆದೇಶಕ್ಕೆ ಸಂಬಂಧಿಸಿದಂತೆ ಆಗಸ್ಟ್ 31ಕ್ಕೆ ಹೈಕೋರ್ಟ್ ವಿಚಾರಣೆ ನಡೆಸಿ, ಆದೇಶದ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿತ್ತು. ಈ ಕಾಲಾವಧಿಯಲ್ಲಿ ಯಾರೇ ಸಮಸ್ಯೆ ಅನುಭವಿಸಿದ್ರೂ ಹೈಕೋರ್ಟ್ ಬಾಗಿಲು ತಟ್ಟಬಹುದು ಎಂದು ನ್ಯಾಯಾಲಯ ಹೇಳಿತ್ತು.  ಇದನ್ನೂ ಓದಿ: ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

ಬಿಎಂಸಿಗೆ ಚಾಟಿ: ಹೈಕೋರ್ಟ್ ನೀಡಿದ ಆದೇಶವನ್ನ ಬಿಎಂಸಿ ಪಾಲನೆ ಮಾಡೋದರಲ್ಲಿ ವಿಫಲವಾದಂತೆ ಕಾಣಿಸುತ್ತಿದೆ. ನೋಟಿಸ್ ನೀಡಿದ 24 ಗಂಟೆಯೊಳಗೆ ಕಚೇರಿ ಮತ್ತು ಮನೆ ನೆಲಸಮ ಮಾಡುವ ಆತುರವೇನಿತ್ತು? ಇಂದು ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುವ ವಿಷಯ ತಿಳಿಸಿದಿದ್ದರೂ ಬಿಎಂಸಿ ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎಂದು ಹೈಕೋರ್ಟ್ ಬಿಎಂಸಿಗೆ ಚಾಟಿ ಬೀಸಿದೆ. ಇದನ್ನೂ ಓದಿ: ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್‍ಗೆ ವೈ ದರ್ಜೆಯ ಭದ್ರತೆ

ಕಂಗನಾ ರಣಾವತ್ ಮನೆ ಮತ್ತು ಕಚೇರಿ ನೆಲಸಮ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆಗಳು ಆರಂಭಗೊಂಡಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಕಂಗನಾ ಲಾಕ್‍ಡೌನ್ ಬಳಿಕ ಮೊದಲ ಬಾರಿಗೆ ಮುಂಬೈಗೆ ಆಗಮಿಸಿದ್ದಾರೆ. ಶಿವಸೇನೆ ನಾಯಕರ ಬೆದರಿಕೆ ನೀಡಿದ ಹಿನ್ನೆಲೆ ಕೇಂದ್ರ ಸರ್ಕಾರ ಕಂಗನಾ ರಣಾವತ್ ಅವರಿಗೆ ವೈ ದರ್ಜೆಯ ಭದ್ರತೆ ನೀಡಿದೆ.

ಸರ್ಕಾರದ ವಿರುದ್ಧ ಕಂಗನಾ ಆಕ್ರೋಶ: ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂದು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು, ನನ್ನ ಮುಂಬೈ ಈಗ ಪಿಓಕೆ ಆಗಿದೆ ಎಂದು ಟ್ವೀಟ್ ಮಾಡಿ, ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಹಾಕಿದ್ದಾರೆ. ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಜಾಪ್ರಭುತ್ವದ ಕಗ್ಗೋಲೆ ಬಾಬರ್ ಮತ್ತು ಅವನ ಸೈನಿಕರು ಎಂದು ವ್ಯಂಗ್ಯವಾಡಿದ್ದಾರೆ.

ನಾನು ಮುಂಬೈಗೆ ಬರಲು ವಿಮಾನ ನಿಲ್ದಾಣದಲ್ಲಿದ್ದಾಗ, ಮಹಾರಾಷ್ಟ್ರ ಸರ್ಕಾರ ಮತ್ತು ಅವರ ಗೂಂಡಾಗಳು ನನ್ನ ಮನೆಗ ಮತ್ತು ಆಫೀಸ್‍ಗೆ ಹೋಗಿ ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಅದನ್ನು ಒಡೆದು ಹಾಕಿದ್ದಾರೆ. ಅವರು ಒಡೆದು ಹಾಕಲಿ. ನಾನು ಮುಂಬೈಗಾಗಿ ನನ್ನ ರಕ್ತವನ್ನು ಬೇಕಾದರೂ ಕೊಡಲು ಸಿದ್ಧವಿದ್ದೇನೆ. ಅವರು ಏನೇ ಕಿತ್ತುಕೊಂಡರೂ ನನ್ನ ಹೋರಾಟದ ಗುಣವನ್ನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಟ್ವೀಟ್ ಕಂಗನಾ ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿರುವ, ನನ್ನ ಮನೆಯನ್ನು ಅಕ್ರಮವಾಗಿ ಕಟ್ಟಿದ್ದರೆ, ಅದನ್ನು ಈಗಲೇ ಒಡೆಯಬೇಕಿತ್ತಾ? ಕೊರೊನಾ ಕಾರಣದಿಂದ ಸೆಪ್ಟಂಬರ್ 30ವರೆಗೆ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ಮನೆಗಳನ್ನು ಕೆಡವುವಂತಿಲ್ಲ ಎಂದು ಹೇಳಿದೆ. ಫ್ಯಾಸಿಸಮ್ ಎಂದರೆ ಏನು ಎಂಬುದನ್ನು ಬಾಲಿವುಡ್ ಈಗ ನೋಡುತ್ತಿದೆ ಎಂದು ಕಂಗನಾ ಹೇಳಿದ್ದಾರೆ. ಜೊತೆಗೆ ನಾನು ಪ್ರೀತಿ ಇಂದು ಹಲವಾರು ವರ್ಷದಿಂದ ಕಟ್ಟಿದ ಮನೆಯನ್ನು ಕೆಡವಲು ನನಗೆ ಎಚ್ಚರಿಕೆಯ ನೋಟಿಸ್ ಕಳುಹಿಸಲಾಗಿದೆ. ಅವರು ಮನೆಯನ್ನು ಕೆಡವಬಹುದು ನನ್ನ ಆತ್ಮಬಲವನ್ನು ಅಲ್ಲ ಎಂದು ಕಂಗನಾ ತಿಳಿಸಿದ್ದಾರೆ.

14 ನಿಯಮ ಉಲ್ಲಂಘನೆ: ಮುಂಬೈನ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ಅವರು ಕಚೇರಿಯಲ್ಲಿ 14 ಬಗೆಯ ನಿಯಮ ಉಲ್ಲಂಘನೆ ಮಾಡಿರೋದನ್ನ ಪಟ್ಟಿ ಮಾಡಿದ್ದೇವೆ. ಜೊತೆಗೆ ಕಂಗನಾ ಬಾಂದ್ರಾ ಬಂಗಲೆಯಲ್ಲಿ ಕೂಡ ಅಕ್ರಮವಾದ ಕೆಲ ರಚನೆಗಳು ಕಂಡು ಬಂದಿವೆ. ಹೀಗಾಗಿ ನಾವು ಅವುಗಳನ್ನು ನೆಲಸಮ ಮಾಡಿ ಅವರಿಗೆ ವಿಳಾಸದಲ್ಲಿಯೇ ನೋಟಿಸ್ ನೀಡಲಾಗಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *