ತುಮಕೂರಲ್ಲಿ ಕಂಗನಾ ವಿರುದ್ಧ ದೂರು ದಾಖಲು

ತುಮಕೂರು: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ತುಮಕೂರಿನ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.

ಹೈಕೋರ್ಟ್ ವಕೀಲ ರಮೇಶ್ ನಾಯಕ್ ಖಾಸಗಿ ದೂರು ದಾಖಲಿಸಿದ್ದು, ಸಂಸತ್ತಿನಲ್ಲಿ ಕೃಷಿ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ಇದನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು ಭಯೋತ್ಪಾದಕರು ಎಂದು ಕಂಗನಾ ಟ್ವಿಟ್ಟರ್ ನಲ್ಲಿ ಅಪಮಾನಿಸಿದ್ದಾರೆ. ಇದರಿಂದ ಲಕ್ಷಾಂತರ ರೈತರಿಗೆ ಅಪಮಾನ ಮಾಡಿದ್ದಾರೆ ಎಂದು ಜೆಎಮ್‍ಎಫ್ ನ್ಯಾಯಾಲಯದಲ್ಲಿ ಪಿಸಿಆರ್ ಕ್ರಿಮಿನಲ್ ದೂರನ್ನು ರಮೇಶ್ ಶುಕ್ರವಾರ ಮಧ್ಯಾಹ್ನ ದಾಖಲಿಸಿದ್ದಾರೆ.

ಕಂಗನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದರು. ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಜಿಲ್ಲಾ ಪ್ರಧಾನ ಮತ್ತು ನ್ಯಾಯಾಧೀಶರಿಗೆ ಅನುಮತಿ ಕೋರಿದ್ದರು. ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಕಾದು ನೋಡಬೇಕಿದೆ.

ಕೃಷಿ ಮಸೂದೆ ಕುರಿತು ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದ್ದು, ಹಲವು ರೈತ ಸಂಘಟನೆಗಳು ರಾಷ್ಟ್ರವ್ಯಾಪಿ ಬಂದ್‍ಗೆ ಕರೆ ನಿಡಿದ್ದರು. ಅಲ್ಲದೆ ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಈ ಪ್ರತಿಭಟನೆ ಕುರಿತು ಕಂಗನಾ ರಣಾವತ್ ಟ್ವೀಟ್ ಮಾಡಿ ಹೋರಾಟಗಾರರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು. ಹೀಗಾಗಿ ಅವರ ಟ್ವೀಟ್ ಕುರಿತು ಇದೀಗ ವಿವಾದ ಹುಟ್ಟಿಕೊಂಡಿದೆ, ಸಾಕಷ್ಟು ಚರ್ಚೆಯಾಗುತ್ತಿದೆ.

Comments

Leave a Reply

Your email address will not be published. Required fields are marked *