ಟಿಆರ್‌ಎಸ್‌, ಓವೈಸಿಯ ಕೋಟೆ ಛಿದ್ರ – ಹೈದರಾಬಾದ್‌ನಲ್ಲಿ ಬಿಜೆಪಿ ಮುನ್ನಡೆ

ಹೈದರಾಬಾದ್‌: ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಸಿಎಂ ಚಂದ್ರಶೇಖರ್‌ ರಾವ್‌ ಮತ್ತು ಅಸಾದುದ್ದೀನ್ ಒವೈಸಿಯ ಕೋಟೆಯನ್ನು ಛಿದ್ರಗೊಳಿಸಿ ಬಿಜೆಪಿ ಮೊದಲ ಬಾರಿಗೆ ಎರಡಂಕಿಯನ್ನು ದಾಟಿ  ಮುನ್ನಡೆಯುತ್ತಿದೆ.

ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಒಟ್ಟು 150 ಸ್ಥಾನಗಳ ಪೈಕಿ ಟಿಆರ್‌ಎಸ್‌ 71ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 40, ಎಐಎಂಎಂ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್‌ 3 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ವಿಶೇಷ ಏನೆಂದರೆ 2016ರ ಚುನಾವಣೆಯಲ್ಲಿ ಟಿಆರ್‌ಎಸ್‌ 99, ಎಐಎಂಎಂ 44, ಕಾಂಗ್ರೆಸ್‌ 3 ವಾರ್ಡ್‌ಗಳನ್ನು ಗೆದ್ದುಕೊಂಡಿದ್ದರೆ ಬಿಜೆಪಿ ಕೇವಲ 4 ವಾರ್ಡ್‌ಗಳನ್ನು ಮಾತ್ರ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು. ಪರಿಣಾಮ ಗೃಹ ಸಚಿವ ಅಮಿತ್‌ ಶಾ ಆದಿಯಾಗಿ ಕೇಂದ್ರದ ಬಿಜೆಪಿ ನಾಯಕರು ವ್ಯಾಪಕ ಪ್ರಚಾರ ಕೈಗೊಂಡಿದ್ದರು.

ಈ ಬಾರಿ ಕೊರೊನಾ ಸುರಕ್ಷಾ ಕ್ರಮಗಳನ್ನು ಪಾಲಿಸಿಕೊಂಡು ಚುನಾವಣೆ ನಡೆಸಿದ ಕಾರಣ ಮತಗಟ್ಟೆಯ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು. ಅಷ್ಟೇ ಅಲ್ಲದೇ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆದಿರುವ ಕಾರಣ ಅಂತಿಮ ಫಲಿತಾಂಶಗಳು ರಾತ್ರಿ ಪ್ರಕಟವಾಗುವ ಸಾಧ್ಯತೆಯಿದೆ. ಕೆಲವು ವಾರ್ಡ್‌ಗಳಲ್ಲಿ ಭಾರೀ ಪೈಪೋಟಿ ಇದ್ದು ಈಗ ಮುನ್ನಡೆಯಲ್ಲಿದ್ದರೂ ಅಂತಿಮ ಫಲಿತಾಂಶದಲ್ಲಿ ಬದಲಾಗುವ ಸಾಧ್ಯತೆಯಿದೆ.

ಸಂಜೆ 4:30ರ ವೇಳೆಗೆ ಒಟ್ಟು 34 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಟಿಆರ್‌ಎಸ್‌ 15, ಎಐಎಂಎಂ 13, ಬಿಜೆಪಿ 4, ಕಾಂಗ್ರೆಸ್‌ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

Comments

Leave a Reply

Your email address will not be published. Required fields are marked *