ಒಬ್ಬ ನಾಯಕನ ಹಿನ್ನಡೆಗೆ ಮೇಯರ್ ಸ್ಥಾನ ಬೇರೆ ಪಕ್ಷಕ್ಕೆ ಬಿಟ್ಟುಕೊಟ್ರು- ಡಿಕೆಶಿ ವಿರುದ್ಧ ಯತೀಂದ್ರ ಪರೋಕ್ಷ ವಾಗ್ದಾಳಿ

ಚಾಮರಾಜನಗರ: ಮೇಯರ್ ಚುನಾವಣೆಯಲ್ಲಿ ಒಬ್ಬ ನಾಯಕರಿಗೆ ಹಿನ್ನೆಡೆ ಉಂಟು ಮಾಡಬೇಕೆಂದು ಸ್ವಪಕ್ಷದವರೇ ಮೇಯರ್ ಸ್ಥಾನವನ್ನು ಬೇರೆ ಪಕ್ಷಕ್ಕೆ ಬಿಟ್ಟುಕೊಟ್ಟರು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದರು.

ನಗರದಲ್ಲಿ ಆರ್.ಧೃವನಾರಾಯಣ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೀತಿಯ ಭಿನ್ನಮತ ಚಟುವಟಿಕೆ ಮತ್ತೆ ಯಾವ ಜಿಲ್ಲೆಯಲ್ಲೂ ಮರುಕಳಿಸಬಾರದು. ಈ ರೀತಿಯ ಘಟನೆಗಳಾದರೆ ಪಕ್ಷದ ಒಗ್ಗಟ್ಟು ಒಡೆಯಲಿದೆ. ಕಾಂಗ್ರೆಸ್‍ನಲ್ಲಿ ಒಗ್ಗಟ್ಟಿಲ್ಲ ಎಂಬ ಭಾವನೆ ಜನರಲ್ಲಿ ಬರಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಹಿಂದೂ ಧರ್ಮದ ವಿರೋಧಿ ಎಂದು ಚಿತ್ರಿಸಲಾಗುತ್ತಿದೆ. ರಾಜಕಾರಣ ಇರುವ ಹಿಂದುತ್ವವೇ ಬೇರೆ, ಎಲ್ಲರನ್ನೂ ಒಳಗೊಳ್ಳುವ ಹಿಂದೂ ಧರ್ಮವೇ ಬೇರೆ ಎಂಬುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಹಿಂದುತ್ವದ ವಿರೋಧಿಯೇ ಹೊರತು ಹಿಂದೂ ಧರ್ಮದ ವಿರೋಧಿಯಲ್ಲ ಎಂಬುದನ್ನು ಜನರಿಗೆ ತಿಳಿ ಹೇಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ನಿರುದ್ಯೋಗ, ಜಿಡಿಪಿ ಕುಸಿತ, ನಿರಂತರ ಬೆಲೆ ಏರಿಕೆ ಬಿಸಿಯ ಬಗ್ಗೆ ಇದೇ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *