ಒಂದೇ ಗ್ರಾಮದ 24 ಮಂದಿಗೆ ಕೊರೊನಾ – ಗ್ರಾಮಸ್ಥರಿಂದಲೇ ಸೆಲ್ಫ್ ಲಾಕ್ ಡೌನ್

ಚಿಕ್ಕಬಳ್ಳಾಪುರ: ಕೊರೊನಾ ಕಡಿವಾಣಕ್ಕೆ ಲಾಕ್‍ಡೌನ್ ಮಾಡ್ಬೇಕಾ ಬೇಡ್ವಾ ಅಂತ ರಾಜ್ಯ ಸರ್ಕಾರ ಚಿಂತನೆ ಮಾಡುತ್ತಿದ್ದರೆ, ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ ಪಾಳ್ಯ ಗ್ರಾಮದಲ್ಲಿ ಈಗಾಗಲೇ ಜನರೇ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡಿಕೊಂಡಿದ್ದಾರೆ.

ಹೌದು. ಡಿ ಪಾಳ್ಯ ಗ್ರಾಮದಲ್ಲಿ 24 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದರಿಂದ ಗ್ರಾಮಪಂಚಾಯ್ತಿ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸ್ವಯಂ ನಿರ್ಣಯ ಕೈಗೊಂಡ ಗ್ರಾಮಸ್ಥರು ಲಾಕ್‍ಡೌನ್ ಮಾಡಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಹಾಗೂ ಕೆಲಸಗಳಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಹಾಗೂ ಸಂಜೆ 6 ರಿಂದ 8 ಗಂಟೆಯವರೆಗೆ ಸಮಯ ನಿಗದಿ ಮಾಡಿಕೊಂಡಿದ್ದಾರೆ.

ಉಳಿದ ಸಮಯ ಗ್ರಾಮದಲ್ಲಿ ಅನಗತ್ಯವಾಗಿ ಯಾರೂ ಒಡಾಡುವಂತಿಲ್ಲ ಸುಖಾಸುಮ್ಮನೆ ಗುಂಪು ಸೇರುವಂತಿಲ್ಲ. ಗುಂಪು ಸೇರೋದು, ಅನಗತ್ಯವಾಗಿ ಒಡಾಟ ಸೇರಿ ಮಾಸ್ಕ್ ಇಲ್ಲದೆ ಹೊರಬಂದವರಿಗೆ ಗ್ರಾಮಪಂಚಾಯ್ತಿ ಅಧಿಕಾರಿಗಳು ದಂಡ ವಿಧಿಸುವ ಕೆಲಸ ಸಹ ಮಾಡ್ತಿದ್ದಾರೆ. ಅಂದಹಾಗೆ ಈ ಗ್ರಾಮದಲ್ಲಿ ಶಿರಡಿ ಸಾಯಿಬಾಬಾ ಮಂದಿರ ನಿರ್ಮಾಣ ಮಾಡಲಾಗುತ್ತಿದ್ದು, ಬಾಬಾ ಮೂರ್ತಿಯನ್ನ ರಾಜಸ್ಥಾನದಲ್ಲಿ ಕೆತ್ತನೆ ಮಾಡಲಾಗುತ್ತಿದೆ.

ಸಾಯಿಬಾಬಾ ವಿಗ್ರಹ ನೋಡಿಕೊಂಡು ಬರಲು ಗ್ರಾಮದ 45 ಮಂದಿ ರಾಜಸ್ಥಾನದ ಜೈಪುರಕ್ಕೆ ಹೋಗಿ ಬಂದಿದ್ರು. ಇವರು ಕೋವಿಡ್ ಟೆಸ್ಟ್ ಗೆ ಒಳಪಟ್ಟಾಗ 34 ಮಂದಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಇವರಲ್ಲಿ 60 ಹಾಗೂ 61 ವರ್ಷದ ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದು, ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರ ಮನೆಗಳನ್ನ ಸಂಪೂರ್ಣ ಲಾಕ್‍ಡೌನ್ ಮಾಡಿ ಸಂಬಂಧಿಕರನ್ನ ಹೋಂ ಕ್ವಾರಂಟೈನ್ ಮಾಡಿ ಅಗತ್ಯ ವಸ್ತುಗಳನ್ನ ಅವರ ಮನೆಗಳಿಗೆ ಸರಬರಾಜು ಮಾಡಲಾಗ್ತಿದೆ ಅಂತ ಡಿ ಪಾಳ್ಯ ಗ್ರಾಮ ಪಂಚಾಯ್ತಿ ಪಿಡಿಓ ಪಬ್ಲಿಕ್ ಟಿವಿಗೆ ತಿಳಿಸಿದರು.

ಡಿ ಪಾಳ್ಯ ಹೋಬಳಿ ಕೇಂದ್ರವಾಗಿದ್ದು ಡಿ ಪಾಳ್ಯ ಗ್ರಾಮದಲ್ಲಿ 1000ಕ್ಕೂ ಹೆಚ್ಚು ಮನೆ 7,000 ಮಂದಿ ಜನ ಸಂಖ್ಯೆ ಇದೆ. ಕೊರೊನಾ ಸೋಂಕಿತರ ಸಂಖ್ಯೆ ಸಂಪೂರ್ಣ ಸೊನ್ನೆ ಆದ ನಂತರ ಪುನಃ ಮನೆ ಮಬೆ ಸರ್ವೆ ನಡೆಸಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮತ್ತೆ ನಿರ್ಣಯ ಮಾಡಿ ಲಾಕ್ ಡೌನ್ ತೆರವುಗೊಳಿಸಲಾಗುವುದು ಅಂತ ಪಿಡಿಒ ವಿಜಯಲಕ್ಷ್ಮೀ ತಿಳಿಸಿದರು.

Comments

Leave a Reply

Your email address will not be published. Required fields are marked *