ಒಂದೂವರೆ ವರ್ಷದ ಕಂದಮ್ಮನನ್ನು ಕೊಂದ ಪಾಪಿ ತಂದೆಗೆ ಮರಣ ದಂಡನೆ ಶಿಕ್ಷೆ

ಗದಗ: ಒಂದೂವರೆ ವರ್ಷದ ಕಂದಮ್ಮನನ್ನು ಕೊಂದಿದ್ದ ಪಾಪಿ ತಂದೆಗೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ.ವಿ.ಪಾಟೀಲ್ ಅವರು ಆದೇಶ ಪ್ರಕಟಿಸಿದ್ದಾರೆ. ರೋಣ ತಾಲೂಕಿನ ಹುಲ್ಲೂರ ಗ್ರಾಮದ ಅಪರಾಧಿ ಪ್ರಶಾಂತಗೌಡ ಪಾಟೀಲ್ ಗೆ ಮರಣ ದಂಡನೆ ಶಿಕ್ಷೆ ನೀಡಲಾಗಿದೆ. ಅಪರಾಧಿ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾನೆ.

ಅಪರಾಧಿ 2013 ರಲ್ಲಿ ಓರ್ವ ಮುಸ್ಲಿಂ ಮಹಿಳೆ ಪ್ರೀತಿಸಿ ಮದುವೆಯಾಗಿದ್ದ, ಕೆಲವು ತಿಂಗಳ ನಂತರ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿ ದೋಖಾ ಮಾಡಿದ್ದ. ನಿತ್ಯ ಕಿರುಕುಳದಿಂದ ನೊಂದ ಪತ್ನಿ ಮಹಿಳಾ ಸಾಂತ್ವನ ಕೇಂದ್ರ ಮೊರೆ ಹೋಗಿದ್ದಳು. ಈ ವೇಳೆ ಒಂದು ಹೆಣ್ಣು ಮಗು ಸಹ ಜನನವಾಗಿತ್ತು. ನಂತರ ಪತ್ನಿ ಕರೆಸಿ ಬುದ್ಧಿ ಹೇಳಿದ ಬಳಿಕ ಚೆನ್ನಾಗಿ ಜೀವನ ಮಾಡುವುದಾಗಿ ತಪ್ಪೊಪ್ಪಿಕೊಂಡಿದ್ದ.

ತಪ್ಪಿನ ಅರಿವಾದ ನಂತರ ರೋಣ ಪಟ್ಟಣದ ಸಿದ್ಧಾರೂಢ ಮಠದ ಬಳಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಕೆಲವು ತಿಂಗಳ ನಂತರ ಸಾಂತ್ವನ ಕೇಂದ್ರ ಕೇಸ್ ಹಿಂಪಡೆಯುವಂತೆ ಆಗಾಗ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಆಗ ನೊಂದ ಪತ್ನಿ ಮಗುವಿಗೆ ಜೀವನಾಂಶ ಬೇಡಿ ಕೋರ್ಟ್ ಮೊರೆ ಹೋಗಿದ್ದಳು. ಆಗ ಒಂದೂವರೆ ವರ್ಷದ ಮಗುವನ್ನು ಏಪ್ರಿಲ್ 6, 2015 ರಂದು ಕಿಡ್ನ್ಯಾಪ್ ಮಾಡಿ, ಗಜೇಂದ್ರಗಡದ ಕಾಲಕಾಲೇಶ್ವರ ಬೆಟ್ಟದಲ್ಲಿ ಕತ್ತುಹಿಸುಕಿ ಕೊಂದು ಸುಟ್ಟುಹಾಕಿ ಸಾಕ್ಷಿಗಳನ್ನು ಸಹ ನಾಶಮಾಡಿ ವಿಕೃತಿ ಮೆರೆದಿದ್ದ.

ನೊಂದ ಮಹಿಳೆ, ಗಂಡನ ಮೇಲೆ ಅನುಮಾನಗೊಂಡು ರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ರೋಣ ಪೊಲೀಸರು ಪ್ರಕರಣ ಬೇಧಿಸಿದ ವೇಳೆ ಅಪರಾಧಿ ಪ್ರಶಾಂತಗೌಡ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೃತ್ಯ ಎಸಗಿರುವುದನ್ನು ಬಾಯ್ಬಿಟ್ಟಿದ್ದ. ಈ ಕುರಿತು ರೋಣ ಹಾಗೂ ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಂತರ ಅಪರಾಧ ಪ್ರಕರಣ ಸಾಬೀತಾದ ಹಿನ್ನೆಲೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರು ಅಪರಾಧಿಗೆ ಮರಣ ದಂಡನೆ ಶಿಕ್ಷೆ ನೀಡಿದ್ದಾರೆ. ಅಪರಾಧ ಎಸಗುವ ವ್ಯಕ್ತಿಗಳಿಗೆ ಇದು ಎಚ್ಚರಿಕೆ ಸಂದೇಶ ಎಂದು ಗದಗ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ಅಭಿಪ್ರಾಯಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *