ಒಂದು ಕೆಜಿಗೂ ಹೆಚ್ಚು ತೂಗುತ್ತೆ ಈ ಹಣ್ಣು- ತೈವಾನ್ ಸೀಬೆಯಿಂದ ಲಕ್ಷ ಲಕ್ಷ ಆದಾಯ

– ಕಡಿಮೆ ಸಮಯ, ಶ್ರಮದಿಂದ ಹೆಚ್ಚು ಆದಾಯ

ಕೋಲಾರ: ಸಾಮಾನ್ಯವಾಗಿ ಒಂದು ಸೀಬೆ ಹಣ್ಣಿನ ತೂಕ 100 ರಿಂದ 250 ಗ್ರಾಂ. ವರೆಗೆ ಇರುತ್ತೆ. ಆದರೆ ಈ ಸೀಬೆಹಣ್ಣು ಸಣ್ಣ ಕುಂಬಳಕಾಯಿಯಂತೆ ಕಾಣುತ್ತೆ, ಕನಿಷ್ಠ 800 ಗ್ರಾಂ. ನಿಂದ ಒಂದು ಕಾಲು ಕೆ.ಜಿ. ಬೆಳೆಯುತ್ತೆ. ರೈತರೊಬ್ಬರು ಪ್ರಯೋಗಿಕವಾಗಿ ತೈವಾನ್ ಸೀಬೆಯನ್ನು ಬೆಳೆದಿದ್ದು, ಆಶ್ಚರ್ಯ ಪಡುವಂತೆ ಮಾಡಿದ್ದಾರೆ.

ಕೋಲಾರ ತಾಲೂಕು ತೊಟ್ಲಿ ಗ್ರಾಮದ ಅಂಬರೀಶ್ ಅವರ ಸೀಬೆ ತೋಟದಲ್ಲಿ ಬೃಹತ್ ಹಣ್ಣುಗಳು ಬೆಳೆದಿದ್ದು, ಹುಬ್ಬೇರಿಸುವಂತೆ ಮಾಡಿದೆ. ಕೋಲಾರ ಬರಪೀಡಿತ ಜಿಲ್ಲೆ ಎಂಬ ಮಾತಿದೆ. ಅದೇ ರೀತಿ ಇಲ್ಲಿನ ರೈತರು ಕೃಷಿ ಪ್ರಯೋಗಗಳೂ ಅಷ್ಟೇ ಹೆಸರುವಾಸಿಯಾಗಿದೆ. ಹೀಗಿರುವಾಗ ತೊಟ್ಲಿ ಗ್ರಾಮದ ಅಂಬರೀಶ್ ಅವರು ಬರದ ನಾಡಿನಲ್ಲಿ ಹೊಸದೊಂದು ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬೆಳೆಗಳನ್ನು ಬೆಳೆಯುತ್ತ ತಮ್ಮ ಆದಾಯ ಗಳಿಕೆಯಲ್ಲಿಯೂ ಕೋಲಾರದ ರೈತರು ಸಾಧನೆ ಮಾಡಿದ್ದಾರೆ. ಅಂಬರೀಶ್ ಮೊದಲು ತಮ್ಮ ಭೂಮಿಯಲ್ಲಿ ರೇಷ್ಮೆ ಬೆಳೆಯುತ್ತಿದ್ದರು. ಆದರೆ ಇತ್ತೀಚೆಗೆ ರೇಷ್ಮೆ ಬೆಲೆ ತೀವ್ರ ಕುಸಿತ ಕಂಡ ಹಿನ್ನೆಲೆ ಸ್ನೇಹಿತರೊಬ್ಬರ ಸಲಹೆ ಮೇರೆಗೆ ತಮ್ಮ ಒಂದೂವರೆ ಎಕರೆ ಭೂಮಿಯಲ್ಲಿ ತೈವಾನ್ ಪಿಂಕ್ ಮತ್ತು ತೈವಾನ್ ವೈಟ್ ಎನ್ನುವ ತಳಿಯ ಸೀಬೆಯನ್ನು ಬೆಳೆದಿದ್ದಾರೆ.

ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲವೋ, ದೇವರ ಕೃಪೆಯೋ ಗೊತ್ತಿಲ್ಲ ಅವರ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ. ಒಂದು ಸೀಬೆಹಣ್ಣು 800 ಗ್ರಾಂ. ನಿಂದ ಒಂದು ಕಾಲು ಕೆ.ಜಿ. ತೂಕ ತೂಗುತ್ತದೆ. ಒಂದು ಸೀಬೆ ಹಣ್ಣಿಗೆ 80 ರಿಂದ 100 ರೂಪಾಯಿ ಸಿಗುತ್ತಿದ್ದು, ಬೆಂಗಳೂರಿನ ಮಾಲ್ ಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ರೈತರಿಗೆ ಒಳ್ಳೆಯ ಆದಾಯದ ಮೂಲ ಎನ್ನುವಂತಾಗಿದೆ.

ಒಂದೂವರೆ ಎಕರೆಯಲ್ಲಿ ಒಂದೂವರೆ ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದ್ದು, ಇದಕ್ಕೆ ಎರಡು ಲಕ್ಷ ರೂಪಾಯಿ ಖರ್ಚಾಗಿದೆ. ಗಿಡಗಳನ್ನು ನಾಟಿ ಮಾಡುವಾಗ ಕೊಟ್ಟಿಗೆ ಗೊಬ್ಬರ ಹಾಕಲಾಗಿದೆ. ವಾರಕ್ಕೆ ಎರಡು ಬಾರಿ ನೀರು ಹಾಯಿಸುವುದು ಹಾಗೂ ಗಿಡಗಳನ್ನು ಆರೈಕೆ ಮಾಡುವುದು ಹೊರತು ಪಡಿಸಿದರೆ ಹೆಚ್ಚು ಶ್ರಮವಿಲ್ಲದೆ ಅಧಿಕ ಆದಾಯ ಗಳಿಸುವುದಕ್ಕೆ ಈ ಸೀಬೆ ತಳಿ ಸಹಕಾರಿಯಾಗಿದೆ.

ಒಮ್ಮೆ ಗಿಡಗಳನ್ನು ನಾಟಿ ಮಾಡಿದರೆ ವರ್ಷಕ್ಕೆ ಎರಡು ಫಸಲು ಕೊಡುತ್ತದೆ. ಅಷ್ಟೇ ಅಲ್ಲದೆ ಸುಮಾರು ಎಂಟರಿಂದ ಒಂಬತ್ತು ವರ್ಷಗಳ ಕಾಲ ಫಸಲು ಕೊಡುತ್ತದೆ. ಇನ್ನು ಆರೋಗ್ಯದ ದೃಷ್ಟಿಯಿಂದಲೂ ಇದು ಹೆಚ್ಚು ಸಕ್ಕರೆ ಅಂಶವಿಲ್ಲದೆ ಆರೋಗ್ಯಕ್ಕೂ ಉತ್ತಮ ಅನ್ನೋ ಕಾರಣಕ್ಕೆ ತೈವಾನ್ ಪಿಂಕ್ ತಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

Comments

Leave a Reply

Your email address will not be published. Required fields are marked *