ಐಪಿಎಲ್‍ನಿಂದ ಚೆನ್ನೈ ಬಹುತೇಕ ಔಟ್ – ಮುಂಬೈಗೆ 10 ವಿಕೆಟ್‍ಗಳ ಭರ್ಜರಿ ಜಯ

– ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಲೀಗ್ ಹಂತದಲ್ಲೇ ಸಿಎಸ್‍ಕೆ ಔಟ್?

ಶಾರ್ಜಾ: ಇಂದು ನಡೆದ ಐಪಿಎಲ್-2020ಯ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಸೋಲಿನ ನಂತರ ಚೆನ್ನೈ ಐಪಿಎಲ್-2020ಯಿಂದ ಬಹುತೇಕ ಹೊರಗೆ ಬಿದ್ದಿದೆ.

ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ, ಮುಂಬೈ ವೇಗಿಗಳ ಮಾರಕ ದಾಳಿಗೆ ಆರಂಭದಲ್ಲೇ ಕುಸಿದಿತ್ತು. ಆದರೆ ಕೊನೆಯಲ್ಲಿ ಸ್ಯಾಮ್ ಕರ್ರನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 115 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್‍ನಿಂದ ಇನ್ನೂ 7.4 ಓವರ್ ಬಾಕಿ ಉಳಿಸಿಕೊಂಡು ಗೆಲುವು ಸಾಧಿಸಿತು.

ಚೆನ್ನೈ ಔಟ್?
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಐಪಿಎಲ್-2020ಯಲ್ಲಿ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಕುಖ್ಯಾತಿಗೆ ಚೆನ್ನೈ ಪಾತ್ರವಾಗುವ ಸಾಧ್ಯತೆಯಿದೆ. ಮೂರು ಬಾರಿ ಕಪ್ ಗೆದ್ದಿರುವ ಚೆನ್ನೈ ತಂಡ ಆಡಿರುವ 10 ಆವೃತ್ತಿಯಲ್ಲೂ ಪ್ಲೇ ಆಫ್ ಹಂತ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದೇ ಮೊದಲ ಬಾರಿಗೆ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗುವ ಸಾಧ್ಯತೆಯಿದೆ. ಜೊತೆಗೆ ಚೆನ್ನೈ ಫಿಕ್ಸಿಂಗ್ ಆರೋಪದ ಮೇಲೆ 206 ಮತ್ತು 2017ರಲ್ಲಿ ಚೆನ್ನೈ ತಂಡ ಐಪಿಎಲ್‍ನಿಂದ ಬ್ಯಾನ್ ಆಗಿತ್ತು.

115ರನ್‍ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಅವರು ಉತ್ತಮ ಆರಂಭ ಮಾಡಿದರು. ಆರಂಭದಿಂದಲೇ ಚೆನ್ನೈ ವೇಗಿಗಳ ಮೇಲೆ ಸವಾರಿ ಮಾಡಿದ ಮುಂಬೈ ಓಪನರ್ ಗಳು ಪವರ್ ಪ್ಲೇ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಳ್ಳದೇ 52 ರನ್ ಸಿಡಿಸಿ ಮಿಂಚಿದರು. ಜೊತೆಗೆ ಈ ಆರಂಭಿಕ ಜೋಡಿ 62 ಬಾಲಿಗೆ 100 ರನ್ ಜೊತೆಯಾಟವನ್ನು ಪೂರ್ಣಗೊಳಿಸಿತು.

ಇದರ ಮಧ್ಯದಲ್ಲೇ ಇಶಾನ್ ಕಿಶಾನ್ ಅವರು ಅರ್ಧಶತಕವನ್ನು ಕೂಡ ಪೂರ್ಣಗೊಳಿಸಿದರು. ಜೊತೆಗೆ ಇವರಿಗೆ ಉತ್ತಮ ಸಾಥ್ ನೀಡಿದ ಕ್ವಿಂಟನ್ ಡಿ ಕಾಕ್ ಅವರು 37 ಬಾಲಿಗೆ ಎರಡು ಸಿಕ್ಸರ್ ಮತ್ತು ಐದು ಬೌಂಡರಿ ಸೇಮತ 46 ರನ್ ಸಿಡಿಸಿದರು. ಆರಂಭದಿಂದಲೇ ಅಬ್ಬರದ ಆಟವಾಡಿದ ಇಶಾನ್ ಕಿಶನ್ ಅವರು 37 ಬಾಲಿಗೆ ಐದು ಭರ್ಜರಿ ಸಿಕ್ಸ್ ಮತ್ತು ಆರು ಬೌಂಡರಿ ಸಮೇತ 68 ರನ್ ಸಿಡಿಸಿ ಮಿಂಚಿದರು.

Comments

Leave a Reply

Your email address will not be published. Required fields are marked *