ಐಪಿಎಲ್‍ನಲ್ಲಿ ಸೂರ್ಯಕುಮಾರ್ ಯಾದವ್‍ನ ಒಂದು ‘ಮುತ್ತಿನ’ ಕಥೆ

ಮುಂಬೈ: ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾಗಿರುವ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿಯವರಿಗೆ ಮೈದಾನದಲ್ಲಿ ಬಯೋ ಬಬಲ್‍ನಲ್ಲೇ ಇದ್ದುಕೊಂಡು ಮುತ್ತು ಕೊಟ್ಟಿದ್ದಾರೆ. ಈ ಮೂಲಕ ಈ ಜೋಡಿ ಹೊಸ ಒಂದು ಮುತ್ತಿನ ಕಥೆಗೆ ಸಾಕ್ಷಿಯಾಗಿದೆ.

ಭಾರತದಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್‍ಗೆ ಕೊರೊನಾ ಹಲವು ರೀತಿಯ ತೊಂದರೆಗಳನ್ನು ಕೊಡುತ್ತಿದೆ. ಈ ನಡುವೆ ಪಂದ್ಯಗಳು ಕೂಡ ಸಾಗುತ್ತಿದೆ. ಹಾಗಾಗಿ ಆಟಗಾರರು ಸುರಕ್ಷಿತವಾಗಿ ಇರುವ ನಿಟ್ಟಿನಲ್ಲಿ ಬಯೋ ಬಬಲ್‍ನಲ್ಲಿದ್ದಾರೆ. ಇದರಿಂದ ತಮ್ಮ ಕುಟುಂಬದವರನ್ನು ಕೂಡ ಭೇಟಿಯಾಗುವ ಅವಕಾಶವಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಮಾತ್ರ ಬಯೋ ಬಬಲ್‍ನಲ್ಲಿದ್ದುಕೊಂಡೆ ತಮ್ಮ ಆಟವನ್ನು ನೋಡಲು ಬಂದ ಪತ್ನಿ ದೇವಿಶಾ ಶೆಟ್ಟಿಯವರಿಗೆ ಗಾಜಿನ ತಡೆಗೊಡೆಯ ಒಂದು ಬದಿಯಲ್ಲಿ ನಿಂತು ಮುತ್ತು ಕೊಡಲು ಪ್ರಯತ್ನಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ದೇವಿಶಾ ಶೆಟ್ಟಿ ಇನ್ನೊಂದು ಬದಿಯಲ್ಲಿ ತಮ್ಮ ಕೆನ್ನೆಯನ್ನು ತೋರಿಸುವ ಮೂಲಕ ಪರಸ್ಪರ ಪ್ರೀತಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದನ್ನು ನೋಡಿದ ಅಭಿಮಾನಿಗಳು ಇವರ ಪ್ರೀತಿಗೆ ಲೈಕ್ ಕೊಟ್ಟು ಖುಷಿಪಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್ 2016ರಲ್ಲಿ ದೇವಿಶಾ ಶೆಟ್ಟಿಯವರನ್ನು ಮದುವೆಯಾಗಿದ್ದರು. ಆ ಬಳಿಕ ಕ್ರಿಕೆಟ್‍ನಲ್ಲಿ ಉತ್ತಮ ಸಾಧನೆ ತೋರುತ್ತಿರುವ ಯಾದವ್ ಟೀಂ ಇಂಡಿಯಾದಲ್ಲಿ ನಿಗದಿತ ಓವರ್‍ಗಳ ತಂಡದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ನಡೆಯುತ್ತಿರುವ ಐಪಿಎಲ್‍ನಲ್ಲಿ ಮುಂಬೈ ಪರ ಬ್ಯಾಟ್ ಬೀಸುತ್ತಿರುವ ಯಾದವ್ 6 ಪಂದ್ಯಗಳಿಂದ ಒಂದು ಅರ್ಧಶತಕ ಸಹಿತ 170 ರನ್ ಸಿಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ಆಟಗಾರರು ಬಯೋ ಬಬಲ್‍ನಲ್ಲಿ ತಮ್ಮ ಮಡದಿಯರ ಜೊತೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿದೆ. ಆದರೂ ಕೆಲ ಆಟಗಾರರು ಕುಟುಂಬವನ್ನು ತಮ್ಮ ಜೊತೆಗೆ ಇರಿಸಿಕೊಳ್ಳದೆ ದೂರ ಇಟ್ಟಿದ್ದಾರೆ.

Comments

Leave a Reply

Your email address will not be published. Required fields are marked *