ಐಪಿಎಲ್‍ನಲ್ಲಿ ತಂಡಗಳನ್ನ ಹೆಚ್ಚಿಸಲು ಇದೇ ಸರಿಯಾದ ಸಮಯ: ದ್ರಾವಿಡ್

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಅನ್ನು ವಿಸ್ತರಿಸಲು ಇದು ಸರಿಯಾದ ಸಮಯ. ಟೂರ್ನಿಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ದೇಶದಲ್ಲಿ ಲಭ್ಯವಿರೋ ಉತ್ತಮ ಗುಣಮಟ್ಟದ ಮತ್ತು ಯುವ ಪ್ರತಿಭೆಗಳ ಬಳಸಿಕೊಂಡು ಟೂರ್ನಿಯನ್ನು ವಿಸ್ತರಿಸಬಹುದಾಗಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ಮನೋಜ್ ಬಾದಲೆ ಬರೆದಿರುವ ‘ಎ ನ್ಯೂ ಇನ್ನಿಂಗ್ಸ್’ ಪುಸ್ತಕ ಬಿಡುಗಡೆ ವೇಳೆ ಮಾತನಾಡಿದ ದ್ರಾವಿಡ್, ಪ್ರತಿಭೆಗಳ ವಿಚಾರದಲ್ಲಿ ನೋಡುವುದಾದರೆ ಐಪಿಎಲ್ ಟೂರ್ನಿಯನ್ನು ವಿಸ್ತರಿಸುವ ಸಮಯ ಬಂದಿದೆ. ಸಾಮರ್ಥ್ಯವಿರುವ ಸಾಕಷ್ಟು ಕ್ರಿಕೆಟ್ ಆಟಗಾರರು ಈ ವೇದಿಕೆ ಮೇಲೆ ಆಡುವ ಅವಕಾಶ ಲಭಿಸಿಲ್ಲ. ಆದ್ದರಿಂದ ತಂಡಗಳ ಸಂಖ್ಯೆಯನ್ನು ಹೆಚ್ಚು ಮಾಡಿದರೆ ಮತ್ತಷ್ಟು ಆಟಗಾರರಿಗೆ ಅವಕಾಶ ಲಭಿಸಲಿದೆ.

ಟೂರ್ನಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಿಸ್ತರಣೆ ನಡೆಯಬೇಕಿದೆ. ಮೊದಲು ರಣಜಿಗೆ ಆಯ್ಕೆ ಆಗಬೇಕಿದ್ದರೆ ರಾಜ್ಯ ಕ್ರಿಕೆಟ್ ಆಕಾಡೆಮಿಗಳನ್ನು ನೆಚ್ಚಿಕೊಳ್ಳಬೇಕಿತ್ತು. ಆಟಗಾರರಿಗೆ ಸೀಮಿತ ಅವಕಾಶಗಳು ಮಾತ್ರ ಲಭ್ಯವಿತ್ತು. ಈಗ ಐಪಿಎಲ್‍ನಿಂದ ಆ ಪರಿಸ್ಥಿತಿ ಬದಲಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.

ಕೋಚ್‍ಗಳಾಗಿ ನಾವು ಸಹಕಾರ ನೀಡಿದರೂ ಅನುಭವದ ಮೂಲಕವೇ ಆಟಗಾರರು ಕಲಿತುಕೊಳ್ಳಬೇಕಿದೆ. ಲೀಗ್‍ನಲ್ಲಿ ಯುವ ಕ್ರಿಕೆಟಿಗ ಪಡಿಕ್ಕಲ್ ಕೊಹ್ಲಿ, ಡಿವಿಲಿರ್ಸ್ ರಂತಹ ಹಿರಿಯ ಆಟಗಾರರೊಂದಿಗೆ ಆಡಿದ್ದರು. ಈ ಅನುಭವ ಆತನನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಸಹಕಾರಿಯಾಗಲಿದೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣದಿಂದಲೇ ನಟರಾಜನ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ ಎಂದರು. ಇದೇ ವೇಳೆ 5ನೇ ಬಾರಿಗೆ ಟೈಟಲ್ ಗೆದ್ದ ಮುಂಬೈಗೆ ದ್ರಾವಿಡ್ ಅಭಿನಂದನೆ ಸಲ್ಲಿಸಿದರು. ಮುಂದಿನ ವರ್ಷ 9 ತಂಡಗಳೊಂದಿಗೆ ಐಪಿಎಲ್ ಆಯೋಜಿಸಲು ಖಂಡಿತ ಸಾಧ್ಯವಿದೆ. ಈ ಬಗ್ಗೆ ಬಿಸಿಸಿಐ ಚಿಂತಿಸಬೇಕಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *