ಐಪಿಎಲ್‍ಗಾಗಿ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ ರಾಂಚಿ ರ‍್ಯಾಂಬೋ

ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗಾಗಿ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ್ದಾರೆ.

ಧೋನಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದು, ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮಾತ್ರ ಆಡುತ್ತಿದ್ದಾರೆ. 2020ರ 13ನೇ ಆವೃತ್ತಿಯ ಐಪಿಎಲ್‍ನಲ್ಲಿ ಭಾಗವಹಿಸಿದ ಬಳಿಕ ಇದೀಗ 2021ನೇ 14 ನೇ ಆವೃತ್ತಿಯ ಐಪಿಎಲ್ ಪಂದ್ಯವಾಡಲು ಧೋನಿ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಐಪಿಎಲ್ ಟೂರ್ನಿ ಏಪ್ರಿಲ್ 9 ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಸಿಎಸ್‍ಕೆ ತಂಡದ ಆಟಗಾರರಾದ ಅಂಬಟಿ ರಾಯಡು, ಖುತುರಾಜ್ ಗಯಾಕ್ವಾಡ್, ಜಗದೀಶನ್ ಸೇರಿದಂತೆ ಕೆಲ ಆಟಗಾರರು ಚೆನ್ನೈ ನಲ್ಲಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.

ಕಳೆದ ಬಾರಿ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದ್ದ ಚೆನ್ನೈ ತಂಡ ಈ ಬಾರಿ ಮತ್ತೆ ತಮ್ಮ ಹಳೆಯ ಘರ್ಜನೆ ತೋರ್ಪಡಿಸಿ ಚಾಂಪಿಯನ್ ಪಟ್ಟ ಅಲಂಕರಿಸಬೇಕೆಂಬ ಇರಾದೆಯಲ್ಲಿದೆ. ಹಾಗಾಗಿ ಒಂದು ತಿಂಗಳ ಹಿಂದೆಯೇ ತಂಡದ ಸದಸ್ಯರು ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

13 ಆವೃತ್ತಿಗಳಲ್ಲಿ 3 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರು ಸಿಎಸ್‍ಕೆ ತಾನಾಡಿದ ಇನ್ನುಳಿದ ಎಲ್ಲಾ ಆವೃತ್ತಿಗಳಲ್ಲಿ ಪ್ಲೇಆಫ್ ಹಂತಕ್ಕೆ ಏರಿತ್ತು. ಆದರೆ 13 ನೇ ಆವೃತ್ತಿಯ ಐಪಿಎಲ್‍ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಹಾಗಾಗಿ ಈ ಬಾರಿ ತಂಡದ ಮೇಲೆ ಬಾರಿ ನಿರೀಕ್ಷೆ ಇರಿಸಲಾಗಿದೆ. ಚೆನ್ನೈ ಫ್ರಾಂಚೈಸಿ ತಂಡದ ನಾಯಕ ಧೋನಿ ಮತ್ತು ಇತರ ಆಟಗಾರರನ್ನು ಅದ್ದೂರಿಯಾಗಿ ತಂಡಕ್ಕೆ ಬರಮಾಡಿಕೊಂಡು ಛಾಯಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಸಿಎಸ್‍ಕೆ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 10 ರಂದು ಮುಂಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

Comments

Leave a Reply

Your email address will not be published. Required fields are marked *