ಐಎಎಸ್ ಕನಸು ಕಂಡಿದ್ದ ಸರ್ಕಾರಿ ನೌಕರೆ ಸೆಪ್ಟಿಕ್ ಟ್ಯಾಂಕ್‍ಗೆ ಬಿದ್ದು ಸಾವು

– ಮುಗಿಲು ಮುಟ್ಟಿದ ತಂದೆಯ ಆಕ್ರಂದನ
– ಸರ್ಕಾರಿ ಕಚೇರಿ ವಿರುದ್ಧ ಆಕ್ರೋಶ

ಚೆನ್ನೈ: ಶೌಚಕ್ಕೆಂದು ಹೊರಗಡೆ ಹೋದ ಸರ್ಕಾರಿ ಮಹಿಳಾ ಉದ್ಯೋಗಿಯೊಬ್ಬರು ದುರಂತವಾಗಿ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮೃತರನ್ನು ಶರಣ್ಯ(24) ಎಂದು ಗುರುತಿಸಲಾಗಿದೆ. ಈಕೆ ಕಾಂಚೀಪುರಂ ಕೃಷಿ ಅಭಿವೃದ್ಧಿ ಇಲಾಖೆಯ ಗೋದಾಮಿನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶರಣ್ಯ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆಂದು ಪ್ರತ್ಯೇಕ ಶೌಚಾಲಯ ಇಲ್ಲದಿರುವುದೇ ಈ ದುರಂತಕ್ಕೆ ಕಾರಣವಾಗಿದೆ.

ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಮಹಿಳೆಯರು ಪಕ್ಕದ ಕಟ್ಟಡ ಅಥವಾ ಮನೆಗಳಿಗೆ ಹೋಗುತ್ತಿದ್ದರು. ಅಂತೆಯೇ ಶರಣ್ಯ ಅವರು ಶನಿವಾರ ಶೌಚಕ್ಕೆಂದು ಹೊರಗಡೆ ಹೋದವರು ಮತ್ತೆ ವಾಪಸ್ ಬರಲೇ ಇಲ್ಲ. ಹೊರಗಡೆ ಹೋದ ಶರಣ್ಯ ಆಫೀಸಿಗೆ ಬರದಿರುವುದರಿಂದ ಸಹೋದ್ಯೋಗಿಗಳು ಆಕೆಯನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಆಕೆ ನಿರ್ಮಾಣ ಹಂತದ ಮನೆಯೊಂದರ ತೆರೆದ ಸೆಪ್ಟಿಕ್ ಟ್ಯಾಂಕ್ ಒಳಗೆ ಬಿದ್ದು ಮೃತಪಟ್ಟಿದ್ದರು. ಈ ವಿಚಾರ ಶರಣ್ಯ ಕುಟುಂಬಕ್ಕೆ ಗೊತ್ತಾಗುತ್ತಿದ್ದಂತೆಯೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.

ಇಡೀ ಕುಟುಂಬವನ್ನು ಶರಣ್ಯ ನಿಭಾಯಿಸುತ್ತಿದ್ದರು. ಹೀಗಾಗಿ ತಂದೆ ಪಾಡು ಹೇಳತೀರದಾಗಿತ್ತು. ಶರಣ್ಯ ನನ್ನ ಜೀವ, ಆಕೆಯ ಸಾವನ್ನು ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ನನ್ನ ಮಗಳು ಐಎಎಸ್ ಕನಸು ಕಂಡಿದ್ದಳು. ಕೆಲಸ ಮಾಡುತ್ತಲೇ ಐಎಎಸ್ ಗೆ ತಯಾರಾಗಲು ನಿರ್ಧರಿಸಿದ್ದಳು. ಆಕೆಯ ಕನಸು ಸಾವಿನೊಂದಿಗೆ ಕೊನೆಯಾಯಿತು ಎಂದು ಶರಣ್ಯ ತಂದೆ ಷಣ್ಮುಗಂ ಕಣ್ಣೀರು ಹಾಕಿದ್ದಾರೆ.

ಶರಣ್ಯ ಟಿಎಸ್‍ಪಿಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡಿದ್ದಳು. ಆಕೆ ಈ ಹಿಂದೆ ಒಂದು ಬಾರಿ ಕೆಲಸ ಬಿಡುವ ನಿರ್ಧಾರ ಕೂಡ ಮಾಡಿದ್ದಳು. ಪ್ರತಿ ದಿನ ಆಕೆ ತನ್ನ ಸಹೋದ್ಯೋಗಿಗಳ ಜೊತೆಯೇ ಶೌಚಕ್ಕೆ ಹೋಗುತ್ತಿದ್ದಳು. ಆದರೆ ಈ ಬಾರಿ ಯಾಕೆ ಹೀಗಾಯ್ತು ಅಂತ ಗೊತ್ತಾಗುತ್ತಿಲ್ಲ ಎಂದು ತಂದೆ ಅಳುತ್ತಲೇ ಹೇಳಿದರು.

ಟ್ಯಾಂಕ್ ಒಳಗೆ ಬಿದ್ದಿದ್ದು ಹೇಗೆ..?
ಕಚೇರಿ ಆವರಣದಲ್ಲಿಯೇ ಸರ್ಕಾರದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಬಳಿ ಶರಣ್ಯ ಶನಿವಾರ ಶೌಚಕ್ಕೆ ತೆರಳಿದ್ದರು. ಸಣ್ಣ ಶೀಟ್ ನಿಂದ ಸೆಪ್ಟಿಕ್ ಟ್ಯಾಂಕ್ ಮುಚ್ಚಲಾಗಿತ್ತು. ಅದನ್ನು ತೆರೆದು ಸೂಸೂ ಮಾಡಬೇಕಿತ್ತು. ಅಂತೆಯೇ ಶರಣ್ಯ ಸೂಸು ಮಾಡಲೆಂದು ಕುಳಿತಾಗ ಆಕಸ್ಮಿಕವಾಗಿ ಕಾಲು ಜಾರಿ ಟ್ಯಾಂಕ್ ಒಳಗಡೆ ಬಿದ್ದಿದ್ದಾರೆ.

ಇತ್ತ ಸುಮಾರು ಅರ್ಧ ಗಂಟೆವರೆಗೂ ಶರಣ್ಯ ಬಾರದಿದ್ದಾಗ ಸಹೋದ್ಯೋಗಿಗಳು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಟ್ಯಾಂಕ್‍ನಲ್ಲಿ ಚಪ್ಪಲಿ ತೇಲುತ್ತಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೇ ಟ್ಯಾಂಕ್ ಒಳಗಡೆ ಇದ್ದ ಶರಣ್ಯ ಅವರನ್ನು ಮೇಲಕ್ಕೆತ್ತಿ ನಂತರ ಕಾಂಚೀಪುರಂ ಸರ್ಕರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಶರಣ್ಯ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ಕಚೇರಿಯಲ್ಲಿ ಶೌಚಾಲಯ ಇಲ್ಲದಿರುವುದರಿಂದ ಶರಣ್ಯ ಸಾವಿಗೆ ಕಂಬನಿ ಜೊತೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

Comments

Leave a Reply

Your email address will not be published. Required fields are marked *