SSLC ಪರೀಕ್ಷೆ ರದ್ದು ಮಾಡಿ: ಎಚ್. ವಿಶ್ವನಾಥ್ ಮತ್ತೊಮ್ಮೆ ಆಗ್ರಹ

-ಡಿಕೆಶಿ ಸೌಜನ್ಯ ಮೆಚ್ಚುವಂತದ್ದು, ಕಾಂಗ್ರೆಸ್‍ಗೆ ಹೋಗಲ್ಲ

ಮೈಸೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೈಸೂರಿನಲ್ಲಿ ಒತ್ತಾಯಿಸಿದ್ದಾರೆ.

ಅಕ್ಷರ ಆರೋಗ್ಯ ಚೆನ್ನಾಗಿದ್ದರೆ ಆಡಳಿತ ಚೆನ್ನಾಗಿರುತ್ತದೆ. ಮಗುವಿನ ಆರೋಗ್ಯ ಸುರಕ್ಷತೆ ಈಗ ಮುಖ್ಯ. ನಂತರ ಶಿಕ್ಷಣ ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ದೊಡ್ಡ ಅನಾಹುತವಾಗುತ್ತದೆ ಎಂದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಗ್ಗೆ ಶಿಕ್ಷಣ ಸಮಿತಿಯ ವರದಿ ಏನು ಹೇಳಿದೆ? ನೀವು ಆರೋಗ್ಯ ಇಲಾಖೆಯ ಸಲಹೆ ತೆಗೆದುಕೊಂಡಿದ್ದೀರಾ? ಇದು ಯಾವುದನ್ನು ನೀವು ತೆಗೆದುಕೊಂಡಿಲ್ಲ. ಪರೀಕ್ಷೆ ನಡೆಸುವುದು ಹುಡುಗಾಟನಾ ದ್ವಿತೀಯ ಪಿಯುಸಿಗೆ ಪರೀಕ್ಷೆ ಇಲ್ಲ. ಹಾಗಿದ್ದರೆ ಅವರಿಗಿಂತ ಚಿಕ್ಕವರಾದ ಎಸ್‍ಎಸ್‍ಎಲ್‍ಸಿ ಅವರಿಗೆ ಏಕೆ? ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಪರೀಕ್ಷೆ ಏಕೆ?
ಬಹುತೇಕ ರಾಜ್ಯಗಳಲ್ಲಿ ಪರೀಕ್ಷೆ ಮಾಡುತ್ತಿಲ್ಲ. ಈ ಮಕ್ಕಳಿಗೆ ಇನ್ನೂ ಲಸಿಕೆ ಬಂದಿಲ್ಲ. ಪರೀಕ್ಷೆ ಬರೆಯಲು 8.5 ಲಕ್ಷ ಮಕ್ಕಳಿದ್ದಾರೆ. ಮೈಸೂರಿನಲ್ಲಿ 39 ಸಾವಿರ ಮಕ್ಕಳಿದ್ದಾರೆ. ಪರೀಕ್ಷೆ ನಡೆಸುವಾಗ 4 ಜನ ಸಂಪರ್ಕಕ್ಕೆ ಬರುತ್ತಾರೆ. ಸುಮಾರು 32 ಲಕ್ಷ ಜನರು ಸೇರುತ್ತಾರೆ. ಈಗ ಎಲ್ಲಾ ಕಡೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕೇಳುವ ಕಾಲ. ಮಕ್ಕಳ ಬಳಿ ಯಾವ ಸರ್ಟಿಫಿಕೇಟ್ ಕೇಳುತ್ತೀರಾ? ಎಂದರು.

ಡೆಲ್ಟಾ ಆತಂಕ ಹೆಚ್ಚಾಗುತ್ತಿದೆ. ಆರೋಗ್ಯ ಸಚಿವರೇ ಇದನ್ನು ಒಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪರೀಕ್ಷೆ ಏಕೆ? ಡೆಲ್ಟಾ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ. ವೈದ್ಯರು ಇದನ್ನೇ ಹೇಳುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪರೀಕ್ಷೆ ಬೇಡ ಎಂದು ಹೇಳಿದರು.

ಇದೆಲ್ಲಾ ಸಚಿವರಿಗೆ ಅರ್ಥವಾಗಿಲ್ಲವಾ?
ದಲಿತ ಸಮುದಾಯವನ್ನು ಶಿಕ್ಷಣದಲ್ಲಿ ತುಳಿಯುವ ಹುನ್ನಾರ ಇದರಲಿದೆ. ಅವರಿಗೆ ಯಾವುದೇ ಸೌಲಭ್ಯ ಕೊಡದೆ ಈ ರೀತಿ ಪರೀಕ್ಷೆ ಮಾಡಿದರೆ. ಇದರ ಹೊಣೆ ಯಾರು ತೆಗೆದುಕೊಳ್ಳುತ್ತಾರೆ. 45 ಕೋಟಿ ದುಡ್ಡು ಪರೀಕ್ಷೆಗೆ ಕಟ್ಟಿರುವ ಹಣ ಇದೆ. ಆದರೆ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯ ಕೊಟ್ಟಿಲ್ಲ. ಇದೆಲ್ಲಾ ಸಚಿವರಿಗೆ ಅರ್ಥವಾಗಿಲ್ಲವಾ? ಬಡವರ ಸಮಸ್ಯೆ ನಿಮಗೆ ಅರ್ಥವಾಗಲ್ವಾ ಸ್ವಾಮಿ. ನಿಮ್ಮನ್ನು ಜ್ಞಾನ ಸರೋವರ ಅಂತಾರೆ. ನಿಮಗೆ ಗೊತ್ತಾಗುತ್ತಿಲ್ಲವಾ? ಸಮಸ್ಯೆಗಳ ಮಧ್ಯೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಬೇಕಾ? ಪರೀಕ್ಷೆ ಮಾಡಲೇ ಬೇಕಾದರೆ ಆಗಸ್ಟ್ ನಂತರ ಮಾಡಿ. ಹಠ ಚಟ ಇದ್ದರೆ ಎಲ್ಲಾ ಸರಿಯಾದ ಮೇಲೆ ಮಾಡಿ ಎಂದು ಕಿಡಿಕಾರಿದರು.

ಶಕ್ತಿಪೀಠ ಮಸುಕಾಗಿದೆ ಯಾವ ಮಂತ್ರಿ ಏನು ಹೇಳಿದರು ಮಾಡಿ ಅಂತಾರೆ. ಏನಾಗುತ್ತಿದೆ ಅಂತಾ ಸಿಎಂ ಅವರಿಗೂ ಅರ್ಥವಾಗುತ್ತಿಲ್ಲ. ಇದು ಆದರ್ಶವಾದ ಇಲಾಖೆ ಇದಕ್ಕೆ ಸಾಕಷ್ಟು ಮಹತ್ವ ಇದೆ. ಪರೀಕ್ಷೆ ರದ್ದು ಮಾಡಿ ಇವತ್ತೇ ಆದೇಶ ಮಾಡಿ. ಇಲ್ಲ ನಾಳೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗುತ್ತೀರಾ ಎಂದರು.

ಕಾಂಗ್ರೆಸ್‍ಗೆ ಹೋಗಲ್ಲ:
ಇದೇ ವೇಳೆ ಪಕ್ಷದಿಂದ ಹೋದವರು ಮತ್ತೆ ಪಕ್ಷಕ್ಕೆ ಬರುವುದಾದರೆ ಅರ್ಜಿ ಹಾಕಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಸಂಘಟನಾ ಚತುರಾ. ಅವರು ಕರೆದ ತಕ್ಷಣ ಯಾರು ಆ ಪಕ್ಷಕ್ಕೆ ಹೋಗಲ್ಲ. ಆದರೆ ಡಿಕೆ ಶಿವಕುಮಾರ್ ಸೌಜನ್ಯ ಬಹಳ ಮುಖ್ಯ. ಕೆಪಿಸಿಸಿ ಅಧ್ಯಕ್ಷರಾಗಿ ಅವರ ಕರೆದ ಪರಿ ಸೌಜನ್ಯ ಮೆಚ್ಚುವಂತಹದ್ದು. ಆದರೆ, ಸಿದ್ದರಾಮಯ್ಯ ಪ್ರಳಯ ಆದರೂ ಅವರನ್ನು ಸೇರಿಸಲ್ಲ ಎಂದಿದ್ದಾರೆ. ರಾಜಕಾರಣದಲ್ಲಿ ಆ ರೀತಿ ಹೇಳುವುದು ಸರಿಯಲ್ಲ. ಡಿ.ಕೆ ಶಿವಕುಮಾರ್ ಸೌಜನ್ಯ ಚಾತುರ್ಯತೆ ಮೆಚ್ಚುತ್ತೇನೆ. ಸಿದ್ದರಾಮಯ್ಯ ಅವರಿಗೆ ನಾವು ಹೋಗುತ್ತೇವೆ ಎನ್ನುವ ಭಯ ಬೇಡ. ನಾವು ಯಾರು ಬರುವುದಕ್ಕೆ ಸಿದ್ಧರಿಲ್ಲ ಎಂದು ನುಡಿದರು.

ಸಿದ್ದರಾಮಯ್ಯ ಕಾಂಗ್ರೆಸ್ ಸೇರುವ ವೇಳೆ ಸಿದ್ದರಾಮಯ್ಯ ಬಂದರೆ ಪ್ರಳಯ ಅಂತಾ ಹೇಳಿದ್ರಾ? ನಿಮಗೆ ಸೌಜನ್ಯ ಇರಬೇಕು ದ್ವೇಷ ಸಾಧನೆ ಮಾಡುವುದಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್- ಕೊಡಗು ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ನಷ್ಟ

Comments

Leave a Reply

Your email address will not be published. Required fields are marked *