SSLC ಪರೀಕ್ಷೆ- ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಪಾಠ

– ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯಲ್ಲಿ ಶಿಕ್ಷಕರು ಮಗ್ನ
– ಕೊರೊನಾ ನಿಯಮ ಪಾಲಿಸಿ ಪಾಠ

ಮಡಿಕೇರಿ: ಕೊರೊನಾ ವೈರಸ್‍ನಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ತತ್ತರಿಸಿಹೋಗಿದ್ದಾರೆ. ಅದರಲ್ಲೂ ಪರೀಕ್ಷೆ ಸಂದರ್ಭದಲ್ಲೇ ಕೊರೊನಾ ವಕ್ಕರಿಸಿದ್ದು, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆಯಲಾಗದೆ ಭಯಭೀತರಾಗಿದ್ದಾರೆ. ಜೂನ್ ತಿಂಗಳಲ್ಲಿ ಹತ್ತನೇ ತರಗತಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ದಿನಾಂಕ ಪ್ರಕಟಿಸಿದ್ದು, ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಭಯ ದೂರ ಮಾಡಲು ಮನೆಗೆ ತೆರಳಿ ಪಾಠ ಮಾಡುತ್ತಿದ್ದಾರೆ.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವರ್ಷವಿಡೀ ಪಾಠ ಹೇಳಿದ ಶಿಕ್ಷಕರು, ಇದೀಗ ಮನೆ ಮನೆಗೆ ತರೆಳಿ ಪಾಠ ಹೇಳಿಕೊಡಲು ಮುಂದಾಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡಗರಹಳ್ಳಿ ಹಾಗೂ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಠ ಹೇಳುತ್ತಿದ್ದಾರೆ.

ಕೊರೊನಾ ಲಾಕ್‍ಡೌನ್‍ನಿಂದ ವಿದ್ಯಾರ್ಥಿಗಳು ಆಟ ಹಾಗೂ ಇನ್ನಿತರ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದು, ಮನೆಗಳಿಗೆ ತೆರಳಿ ಓದಿಸುತ್ತಿದ್ದಾರೆ. ಸರ್ಕಾರ ಅನ್‍ಲೈನ್ ತರಗತಿಗಳನ್ನು ಆರಂಭಿಸಿದೆ. ಆದರೆ ಗ್ರಾಮೀಣ ಹಾಗೂ ಗುಡ್ಡಗಾಡುವಿನಿಂದ ಕೂಡಿರುವ ಕೊಡಗಿನಲ್ಲಿ ವಿದ್ಯುತ್ ಅನ್‍ಲೈನ್‍ನಂತಹ ಮೂಲಸೌಕರ್ಯಗಳು ವಿರಳ. ನೆಟ್‍ವರ್ಕ್ ಸಮಸ್ಯೆ ಕಾಡುತ್ತದೆ. ಹೀಗಾಗಿ ಶಿಕ್ಷಕರು ಅವರ ಮನೆಗೆ ತೆರಳಿ ಪಾಠ ಮಾಡುತ್ತಿದ್ದಾರೆ.

ಮಾಸ್ಕ್ ಧರಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂನ್ 25ರಿಂದ ಜುಲೈ 4 ರವರೆಗೆ ನಡೆಯಲಿದ್ದು, ಈ ಭಾಗದ ಶಾಲೆಯ 44 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

Comments

Leave a Reply

Your email address will not be published. Required fields are marked *