ಎಸ್‍ಎಸ್‍ಎಲ್‍ಸಿಯಲ್ಲಿ 97.8% ,12ನೇ ತರಗತಿಯಲ್ಲಿ 95.2% – ಅಂಗವೈಫಲ್ಯವನ್ನು ಮೆಟ್ಟಿನಿಂತ ಅನುಷ್ಕಾ ಪಂಡಾ

– ಗೂಗಲ್‍ನಲ್ಲಿ ಎಂಜಿನಿಯರ್ ಆಗಬೇಕೆಂಬ ಬಯಕೆ

ಗುರುಗ್ರಾಮ್: ಎಸ್‍ಎಸ್‍ಎಲ್‍ಸಿಯಲ್ಲಿ 97.8%, 12ನೇ ತರಗತಿಯಲ್ಲಿ 95.2% ಅಂಕ ಗಳಿಸುವ ಮೂಲಕ ಗುರುಗ್ರಾಮ್‍ನ ದಿವ್ಯಾಂಗಿ ಬಾಲಕಿ ಅನುಷ್ಕಾ ಪಂಡಾ ತನ್ನ ಅಂಗವೈಫಲ್ಯವನ್ನು ಮೆಟ್ಟಿನಿಂತಿದ್ದಾಳೆ.

ಅನುಷ್ಕಾಗೆ ಬೆನ್ನುಮೂಳೆ ಸ್ನಾಯುವಿನ ಸಮಸ್ಯೆಯಿದ್ದು, ಆಕೆ ವೀಲ್‍ಚೇರ್ ಇಲ್ಲದೇ ನಿಲ್ಲಲು ಮತ್ತು ಕೂರಲು ಆಗುವುದಿಲ್ಲ. ಆದರೆ ಇದನ್ನು ಲೆಕ್ಕಿಸದ ಅನುಷ್ಕಾ ವೀಲ್‍ಚೇರ್ ಮೇಲೆ ಕುಳಿತೇ ದಿನಕ್ಕೆ ಎರಡು ಗಂಟೆ ಓದಿ ಸಿಬಿಎಸ್‍ಇ 12 ನೇ ತರಗತಿ ಪರೀಕ್ಷೆಯಲ್ಲಿ 95.2% ಅಂಕ ಪಡೆದಿದ್ದಾಳೆ. ಅಂಗವೈಫಲ್ಯ ಇರುವ ಮಕ್ಕಳ ಪೈಕಿ ಆಕೆಯ ಅತೀ ಹೆಚ್ಚು ಅಂಕ ಪಡೆದಿದ್ದಾಳೆ. ಅಲ್ಲದೇ ಭೌತಶಾಸ್ತ್ರ ಪಠ್ಯದಲ್ಲಿ 100ಕ್ಕೆ 99 ಅಂಕ ಗಳಿಸಿದ್ದಾಳೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಅನುಷ್ಕಾ ಪಂಡಾ, ನಾನು ದಿನದಲ್ಲಿ ಎರಡು ಗಂಟೆಗಳ ಕಾಲ ಓದುತ್ತಿದ್ದೆ. ಈಗ ನನ್ನ ಅಂಕ ನೋಡಿ ನನಗೆ ಬಹಳ ಖುಷಿಯಾಗಿದೆ. ನನ್ನ ಶಾಲೆಯಲ್ಲಿ ನನಗೆ ಬಹಳ ಬೆಂಬಲ ನೀಡಿದ್ದಾರೆ. ನಾನು ಅಂಗವಿಕಲೆ ಆಗಿದ್ದ ಕಾರಣ ನನ್ನ ಶಾಲೆಯವರು ಪರೀಕ್ಷೆ ಬರೆಯಲು ವಿಶೇಷ ಆಸನವನ್ನು ಸಿದ್ಧ ಮಾಡಿಸಿ ಕೊಟ್ಟಿದ್ದರು ಎಂದು ಹೇಳಿದ್ದಾರೆ. ಜೊತೆಗೆ ಅನುಷ್ಕಾ ಚೆಸ್ ಆಟಗಾರ್ತಿಯಾಗಿದ್ದಾರೆ. ಜೊತೆಗೆ ಕಳೆದ ಹತ್ತು ವರ್ಷದಿಂದ ಶಾಸ್ತ್ರೀಯ ಸಂಗಿತ ಅಭ್ಯಾಸ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಚಿತ್ರವನ್ನು ಬಿಡಿಸುತ್ತಾರೆ.

ನನಗೂ ನನ್ನ ಅಂಗವೈಫಲ್ಯದ ವಿಚಾರವಾಗಿ ಬಹಳ ಕಿರುಕುಳಗಳನ್ನು ಅನುಭವಿಸಿದ್ದೇನೆ. ಆದರೆ ನಾನು ಅದ್ಯಾವೂದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜೀವನದಲ್ಲಿ ತೊಂದರೆಗಳು ಇರುತ್ತವೆ ಎಂದು ಹೇಳಿದ್ದಾರೆ. ಆಕೆಗೆ ಬೆನ್ನುಮೂಳೆಯ ಸಮಸ್ಯೆಯಿದ್ದು, ಒಂದು ಗಂಟೆಗೂ ಅಧಿಕ ಕಾಲ ಕೂತು ಓದಲು ಆಗುವುದಿಲ್ಲ. ಜೊತೆಗೆ ಆಕೆ ಕತ್ತಿನ ಪಟ್ಟಿಯನ್ನು ಧರಿಸುವ ಕಾರಣ ಹೆಚ್ಚುಕಾಲ ಕುಳಿತುಕೊಳ್ಳಲು ಆಗುವುದಿಲ್ಲ. ಆದರೆ ಇದನ್ನೆಲ್ಲ ಲೆಕ್ಕಿಸದ ಪಂಡಾ ದೃಢನಿಶ್ಚಯ ಮಾಡಿ ದಿನಕ್ಕೆ ಎರಡು ಗಂಟೆ ಓದುತ್ತಾಳೆ ಎಂದು ಆಕೆಯ ತಂದೆ ಅನುಪ್ ಪಂಡಾ ತಿಳಿಸಿದ್ದಾರೆ.

2018ರಲ್ಲಿ ನಡೆದ ಎಲ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 97.8% ಅಂಕಗಳನ್ನು ಪಡೆದಿದ್ದ ಪಂಡಾ, ಅಂದು ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಎಂಜಿನಿಯರ್ ಆಗಬೇಕು ಎಂದಿದ್ದರು. ಜೊತೆಗೆ ನಾನು ಗೂಗಲ್ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಳು. ಅನುಷ್ಕಾ ಬೆನ್ನುಹುರಿಯಲ್ಲಿ ಜೀವಕೋಶಗಳು ನಾಶವಾಗಿದ್ದು, ಆಕೆಗೆ ಉಸಿರಾಟದ ತೊಂದರೆಯಿದೆ. ಜೊತೆಗೆ ಅವಳು ಹೆಚ್ಚು ಕಾಲ ಕುಳಿತುಕೊಳ್ಳಲು ಆಗುವುದಿಲ್ಲ. ಆದರೂ ಆಕೆ ಪರೀಕ್ಷೆ ಬರೆದಿರುವ ಸವಾಲಿನ ವಿಚಾರ ಎಂದು ಅನುಷ್ಕಾಗೆ ಚಿಕಿತ್ಸೆ ನೀಡುವ ವೈದ್ಯರು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಅನುಷ್ಕಾ ಓದುತ್ತಿರುವ ಕಾಲೇಜಿನ ಪ್ರಾಂಶುಪಾಲರಾದ ರೂಪ ಚಕ್ರವರ್ತಿಯವರು, ಅನುಷ್ಕಾ ನಮ್ಮೆಲ್ಲರಿಗೂ ಸ್ಫೂರ್ತಿ. ಅವಳಿಗೆ ಇರುವ ಓದಿನ ಮೇಲಿನ ಆಸಕ್ತಿಯನ್ನು ಬೇರೆ ಮಕ್ಕಳಲ್ಲಿ ಹುಡುಕುವುದು ಬಹಳ ಕಷ್ಟ. ಅವಳು ಸಾಧಿಸಿರುವುದನ್ನು ದೈಹಿಕವಾಗಿ ಸದೃಢವಾಗಿರುವ ಮಕ್ಕಳು ಸಾಧಿಸುವುದು ಕಷ್ಟ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *