ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರಗಿ ಅವರಿಗೆ ಹಲವು ಬಾರಿ ಕಿಚ್ಚ ಸುದೀಪ್ ಎಚ್ಚರಿಸಿದ್ದಾರೆ. ಆದರೂ ಕೆಲ ಸಂದರ್ಭಗಳಲ್ಲಿ ಎಡವಟ್ಟುಗಳು ಆಗುತ್ತಲೇ ಇವೆ. ಹೀಗಾಗಿ ಈ ವಾರದ ಪಂಚಾಯಿತಿಯಲ್ಲಿ ಸಹ ಸುದೀಪ್ ಮತ್ತೆ ಚಕ್ರವರ್ತಿಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ವೈಷ್ಣವಿ ಅವರ ಬಗ್ಗೆ ಪ್ರಶಾಂತ್ ಸಂಬರಗಿ ಬಳಿ ಸುಳ್ಳು ಹೇಳಿದ್ದಕ್ಕೆ ಕ್ಲಾಸ್ ತೆಗೆದುಕೊಂಡಿದ್ದು, ಯಾಕೆ ಸುಳ್ಳು ಹೇಳಿದ್ದೀರಿ, ಯಾಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದಿರಿ, ನಾವೂ ಮನೆಯಲ್ಲಿ ಮತ್ತೆ ಈ ಶೋ ನೋಡಬೇಕು. ನೀವಾಡಿದ ಮಾತುಗಳನ್ನು ಬೀಪ್ ಮಾಡಬೇಕು. ಎಷ್ಟು ಬಾರಿ ಬೀಪ್ ಮಾಡಬೇಕು ಎಂದು ತುಂಬಾ ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಚಕ್ರವರ್ತಿ ಅವರು ಪ್ರತಿಕ್ರಿಯಿಸಿ, ಆ ರೀತಿ ಮಾತನಾಡಬಾರದಿತ್ತು, ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ್ದಾರೆ.

ನೀವು ಹೀಗೆ ಸುಳ್ಳು ಹೇಳಿದರೆ ವೈಷ್ಣವಿ ಅವರ ವ್ಯಕ್ತಿತ್ವ ಏನಾಗಬೇಕು, ಈ ಶಬ್ದ ಬಳಸ್ತಾರಾ ಎಂದು ಪ್ರಶ್ನಿಸಿದ್ದಾರೆ. ಆದರೂ ಚಕ್ರವರ್ತಿ ವಾದ ಮಾಡಿದ್ದಾರೆ. ನನ್ನ ಕಣ್ಣಲ್ಲೇ ಕಣ್ಣಿಟ್ಟು ಸುಳ್ಳು ಹೇಳುತ್ತೀರಿ, ನಾನಿದನ್ನು ಸಹಿಸುವುದಿಲ್ಲ. ಪ್ರತಿಯೊಬ್ಬ ಸ್ಪರ್ಧಿಯ ವ್ಯಕ್ತಿತ್ವ ಕಾಪಾಡುವುದು ನನ್ನ ಕರ್ತವ್ಯ. ಆಟದಲ್ಲಿ ಬಿಗ್ ಬಾಸ್ ಚೌಕಟ್ಟಿನಲ್ಲೇ ಇರಬೇಕು. ಯಾವುದೋ ಒಂದರಿಂದ ಮನೆಯಲ್ಲಿನವರ ಅಭಿಪ್ರಾಯವೇ ಬದಲಾಗುತ್ತಿದೆ ಎಂದರೆ ಅದನ್ನು ನೋಡಿಕೊಂಡು, ಹಾಳಾಗಲಿ ಎಂದು ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಹಾಗಂತ ನನಗೆ ಹತ್ತಿರ, ನನಗೆ ಬೇಕಾದವರು ಎಂದು ಬಿಡಲು ಆಗಲ್ಲ ಎಂದು ಸುದೀಪ್ ಖಾರವಾಗಿ ಎಚ್ಚರಿಸಿದ್ದಾರೆ.

ನೀವು ಹೇಳಿದ್ದನ್ನು ಪ್ರಶಾಂತ್ ನಂಬಿದ್ದರೆ ವೈಷ್ಣವಿ ವ್ಯಕ್ತಿತ್ವ ಏನಾಗಬೇಡ, ವೈಷ್ಣವಿ ಬಗ್ಗೆ ಕೆಟ್ಟ ಅಭಿಪ್ರಾಯ ಸಂಬರಗಿ ಅವರಲ್ಲಿ ಉಳಿಯುತ್ತಿತ್ತು ಎಂದಿದ್ದಾರೆ. ನಿಮ್ಮ ಓದಿಗೆ, ನಿಮ್ಮ ತಿಳುವಳಿಕೆ, ನಿಮಗಿರುವ ಜ್ಞಾನವನ್ನು ಈ ವೇದಿಕೆಯಲ್ಲಿ ಇನ್ನಷ್ಟು ಜನ ಕಲಿಯಲಿ ಎಂದು ಕಳೆದ ಬಾರಿ ಹೇಳಿದ್ದೆ. ಆದರೆ ನೀವು ಯಾವ ಭಾಷೆ ಬಳಸಿದಿರಿ? ಮನೆಯಲ್ಲಿ ನಾವೂ ಕುಳಿತು ನೋಡಬೇಕು ಈ ಶೋವನ್ನು. ಎಷ್ಟು ಸಲ ಬೀಪ್ ಮಾಡುವುದು. ಇದು ನಿಮ್ಮ ವಿದ್ಯೆಯೇ? ಏನು ಭಾಷೆ ಇದು ಒಳಗಡೆ ಎಂದು ಚಕ್ರವರ್ತಿ ಅವರು ಬಳಿಸಿದ ಅವಾಚ್ಯ ಶಬ್ದಗಳ ಬಗ್ಗೆ ಚಳಿ ಬಿಡಿಸಿದ್ದಾರೆ.

Leave a Reply