ಎಲ್ಲರೂ ಕೈ ಬಿಟ್ಟಾಗ ನೀನು ನಂಬಿದೆ: ಅಮ್ಮನ ಕುರಿತು ಕಿಚ್ಚ ಭಾವನಾತ್ಮಕ ಪೋಸ್ಟ್

– ಅಮ್ಮನ ಹುಟ್ಟುಹಬ್ಬಕ್ಕೆ ಕಿಚ್ಚನ ಸವಿ ನೆನಪಿನ ಶುಭಾಶಯ

ಬೆಂಗಳೂರು: ಅಮ್ಮನ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಎಲ್ಲ ಕೆಲಸಗಳನ್ನು ಬದಿಗೊತ್ತಿ ಬಿಡುವು ಮಾಡಿಕೊಂಡಿದ್ದು, ಅವರೊಂದಿಗೆ ಕಾಲ ಕಳೆಯುವ ಮೂಲಕ ವಿಶೇಷ ದಿನವನ್ನು ಸಂಭ್ರಮಿಸಿದ್ದಾರೆ. ಅಲ್ಲದೆ ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಮ್ಮನಿಗೆ ಶುಭ ಕೋರಿದ್ದಾರೆ.

ಅಮ್ಮನಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಕಿಚ್ಚ, ಎಲ್ಲರೂ ನನ್ನನ್ನು ಬಿಟ್ಟು ಹೋಗುತ್ತಿದ್ದಾಗ ನೀನು ನನ್ನಲ್ಲಿ ನಂಬಿಕೆ ಇಟ್ಟಿದ್ದೆ. ಶಾಲೆಯಲ್ಲಿ ನಾನು ಪ್ರಶಸ್ತಿ ಪಡೆದು, ಬೊಕ್ಕೆಯನ್ನು ತಂದಾಗ ತುಂಬಾ ಹರ್ಷ ವ್ಯಕ್ತಪಡಿಸುತ್ತಿದು ಇನ್ನೂ ನೆನಪಿದೆ. ಇಂದಿಗೂ ನಿನ್ನಲ್ಲಿ ಅದೇ ರೀತಿಯ ಸಂತಸವನ್ನು ಕಾಣುತ್ತಿದ್ದೇನೆ. ಇದು ನನ್ನ ಕಡೆಯಿಂದ ಒಂದು ಸಣ್ಣ ಪೋಸ್ಟ್ ಆಗಿರಬಹುದು. ಹ್ಯಾಪಿ ಬರ್ತ್‍ಡೇ ಅಮ್ಮಾ….ನಮ್ಮೊಂದಿಗೆ ನೀನು ಇನ್ನೂ ಹೆಚ್ಚು ವರ್ಷ ಕಾಲ ಕಳೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸುದೀಪ್ ಅವರಿಗೆ ಮೊದಲಿನಿಂದಲೂ ಅಮ್ಮನ ಮೇಲೆ ತುಂಬಾ ಪ್ರೀತಿ, ಹೀಗಾಗಿ ಭಾವನಾತ್ಮಕವಾಗಿ ಹಾಗೂ ಸವಿ ನೆನಪಿನ ಶುಭಾಶಯವನ್ನು ತಿಳಿಸಿದ್ದಾರೆ. ಫ್ಯಾಂಟಮ್ ಹಾಗೂ ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದು, ಲಾಕ್‍ಡೌನ್ ಬಳಿಕ ಹೈದರಾಬಾದ್‍ನಲ್ಲಿ ಫ್ಯಾಂಟಮ್ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ಈ ಕುರಿತು ಅಪ್‍ಡೇಟ್‍ಗಳನ್ನು ಸಹ ನೀಡುತ್ತಿದ್ದಾರೆ. ಅಲ್ಲದೆ ಇನ್ನೊಂದೆಡೆ ಕೋಟಿಗೊಬ್ಬ-3 ಚಿತ್ರೀಕರಣ ಸಹ ನಡೆಯುತ್ತಿದೆ.

ಕಿಚ್ಚ ಸುದೀಪ್ ಅವರನ್ನು ಸಿಡಿಪಿ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ಅಮ್ಮನ ಹುಟ್ಟುಹಬ್ಬವಾಗಿರುವುದರಿಂದ ಅವರೊಂದಿಗೆ ಕಾಲ ಕಳೆಯಬೇಕು ಎಂಬ ಉದ್ದೇಶದಿಂದ ಎಲ್ಲ ಕೆಲಸಗಳನ್ನೂ ಮುಂದೂಡಿದ್ದಾರೆ. ಇಂದು ಸಂಪೂರ್ಣವಾಗಿ ಅಮ್ಮನೊಂದಿಗೆ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಹೀಗಾಗಿ ಮನೆಯಲ್ಲೇ ಅಮ್ಮನೊಂದಿಗೆ ಇದ್ದಾರೆ. ಈ ಮೂಲಕ ಅವರ ದಿನವನ್ನು ವಿಶೇಷವಾಗಿಸಿದ್ದಾರೆ.

Comments

Leave a Reply

Your email address will not be published. Required fields are marked *