ಎರಡ್ಮೂರು ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ: ಕೇಂದ್ರ ಮಂತ್ರಿ

– ‘ಮಹಾ’ ಆಪರೇಷನ್ ಲೋಟಸ್ ನಡೆಯುತ್ತಾ?

ಮುಂಬೈ: ಮುಂದಿನ ಎರಡು ಅಥವಾ ಮೂರು ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಕೇಂದ್ರ ಸಚಿವ ರಾವ್‍ಸಾಹೇಬ್ ಪಾಟೀಲ್ ದಾನ್ವೆ ಭವಿಷ್ಯ ನುಡಿದಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ರಾವ್‍ಸಾಹೇಬ್ ಪಾಟೀಲ್ ಭವಿಷ್ಯ ನುಡಿದಿದ್ದಾರೆ. ಮಹಾರಾಷ್ಟ್ರದಲ್ಲಿ ನಾವು ಸರ್ಕಾರ ರಚಿಸಲ್ಲ ಅಂತ ನೀವು ಯೋಚಿಸಬೇಡಿ. ಮುಂದಿನ ಎರಡ್ಮೂರು ತಿಂಗಳಲ್ಲಿ ಸರ್ಕಾರ ರಚಿಸಲಿದ್ದೇವೆ. ಈ ಚುನಾವಣೆಗಳು ಮುಕ್ತಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಬಿಹಾರ ವಿಧಾನಸಭೆ ಫಲಿತಾಂಶದ ಬಳಿಕ ಮಾತನಾಡಿದ್ದ ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್, ರಾಜ್ಯದಲ್ಲಿ ಠಾಕ್ರೆ ಸರ್ಕಾರ ಮುಂದಿನ ನಾಲ್ಕು ವರ್ಷ ಪೂರ್ಣ ಮಾಡಲ್ಲ. ಉದ್ಧವ್ ಠಾಕ್ರೆ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.

ನಾವು ಸಂವಿಧಾನ ಒಪ್ಪಿಕೊಳ್ಳುವರು. ಹಾಗಾಗಿ ಸಂವಿಧಾನ ವಿರುದ್ಧವಾಗಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಲ್ಲ. ವಿಪಕ್ಷ ಸ್ಥಾನದಲ್ಲಿ ಕುಳಿತು ನಾವು ಸಮರ್ಥವಾಗಿ ಕೆಲಸ ಮಾಡುತ್ತೇವೆ. ಆದ್ರೆ ಮೂರು ಪಕ್ಷಗಳ (ಶಿವಸೇನೆ+ಎನ್‍ಸಿಪಿ+ಕಾಂಗ್ರೆಸ್) ಮೈತ್ರಿ ಅಂತ್ಯವಾಗಲಿದೆ. ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗಬಹುದು ಅಥವಾ ನಾವೇ ಸರ್ಕಾರ ರಚಿಸುವ ಸಾಧ್ಯತೆಗಳಿವೆ ಎಂದು ಚಂದ್ರಕಾಂತ್ ಪಾಟೀಲ್ ಹೇಳಿದ್ದರು.

‘ಮಹಾ’ ಆಪರೇಷನ್ ಲೋಟಸ್?: ಬಿಹಾರ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬಿಜೆಪಿ ಶೀಘ್ರದಲ್ಲೇ ಆಪರೇಷನ್ ಕಮಲಕ್ಕೆ ಮುಂದಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈ ಮಾತುಗಳಿಗೆ ಪೂರಕ ಎಂಬಂತೆ ಚಂದ್ರಕಾಂತ್ ಪಾಟೀಲ್ ಹೇಳಿಕೆ ಮಹಾ ಅಂಗಳದಲ್ಲಿ ಸಂಚಲನ ಮೂಡಿಸಿದೆ.

Comments

Leave a Reply

Your email address will not be published. Required fields are marked *