– ಹಸುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬ
– ಹಸುಗಳಿಲ್ಲದೆ ಕರುಗಳು ಅನಾಥ
ಚಿಕ್ಕಮಗಳೂರು: ಎರಡು ತಿಂಗಳಲ್ಲಿ ಎರಡು ಹಸುಗಳು ಕಳವುವಾಗಿ ರೈತ ಮಹಿಳೆ ಕಣ್ಣೀರಿಡುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಸುಗಳನ್ನು ಕಳೆದುಕೊಂಡ ಮನೆಯೊಡತಿ ಜ್ಯೋತಿ ಕಂಗಾಲಾಗಿದ್ದಾರೆ. ರಾಸುಗಳನ್ನ ನಂಬಿಕೊಂಡೇ ಜ್ಯೋತಿ ಕುಟುಂಬ ಬದುಕು ಕಟ್ಟಿಕೊಂಡಿತ್ತು. ಹಸುಗಳು ಕೊಡುವ ಹಾಲಿನಿಂದಲೇ ಇವರು ಜೀವನ ಕಟ್ಟಿಕೊಂಡಿದ್ದರು. ಆದರೀಗ, ರಾಸುಗಳೇ ಕಳೆದು ಹೋಗಿರುವುದರಿಂದ ರೈತ ಕುಟುಂಬ ಬದುಕಿನ ಬಗ್ಗೆ ಆತಂಕಕ್ಕೀಡಾಗಿದೆ.

ಸುಮಾರು 1 ಲಕ್ಷ ಹಣ ಕೊಟ್ಟು 2 ಹಸುಗಳನ್ನು ತಂದು ಮನೆಯಲ್ಲಿ ಸಾಕುತ್ತಿದ್ದೆವು. ಹಸುಗಳೇ ನಮ್ಮ ಬದುಕಿನ ಮೂಲವಾಗಿದ್ದವು. ಪ್ರತಿನಿತ್ಯ 20 ಲೀಟರ್ ಹಾಲು ಕೊಡುತ್ತಿದ್ದವು. ಆದರೀಗ, ಹಸುಗಳಿಲ್ಲದೇ ಕೊಟ್ಟಿಗೆ ಖಾಲಿಯಾಗಿದೆ. ಮೊದಲ ಬಾರಿ ಒಂದೂವರೆ ತಿಂಗಳ ಹಿಂದೆ ಒಂದು ಹಸು ಕಳವಾಯಿತು. ಈಗ ವಾರದ ಹಿಂದೆ ಮತ್ತೊಂದು ಹಸು ಕೂಡ ಕಾಣೆಯಾಗಿದೆ. ಹಸುಗಳಿಲ್ಲದೇ ಕರುಗಳು ಅನಾಥವಾಗಿವೆ ಎಂದು ರೈತ ಮಹಿಳೆ ಕಣ್ಣೀರಿಟ್ಟಿದ್ದಾರೆ.

ಈಗ ಕೆಲಸವೂ ಇಲ್ಲ, ಕೂಲಿಯೂ ಇಲ್ಲ, ಬದುಕಿಗೆ ಆಧಾರವಾಗಿದ್ದ, ಹಸುವೂ ಇಲ್ಲ. ಸಾಲ ಮಾಡಿ ತಂದಿದ್ದ ರಾಸುಗಳು ಇಲ್ಲ ಎಂದು ಸತೀಶ್-ಜ್ಯೋತಿ ದಂಪತಿ ಕುಟುಂಬ ಕಂಗಾಲಾಗಿದೆ. ಭವಿಷ್ಯದ ಬದುಕನ್ನು ನೆನೆದು ಕಣ್ಣೀರಿಟ್ಟಿದೆ. ಮಲೆನಾಡಲ್ಲಿ ಗೋಕಳ್ಳತನ ಹೆಚ್ಚಾಗಿದ್ದು, ಆಗಾಗ್ಗೆ ಅಲ್ಲಲ್ಲೇ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇತ್ತು. ಆದರೆ ಕಳೆದ ಎರಡು ತಿಂಗಳಿಂದ ಗೋಕಳ್ಳತನದ ಪ್ರಕರಣಗಳು ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಈಗ ಒಂದು ತಿಂಗಳ ಅಂತರದಲ್ಲಿ ಒಂದೇ ಮನೆಯಲ್ಲಿ ಎರಡು ಹಸುಗಳು ಕಳ್ಳತನವಾಗಿದೆ.

ಇದರಿಂದ ಮಲೆನಾಡಲ್ಲಿ ಮತ್ತೆ ಗೋಕಳ್ಳರು ಕಾರ್ಯಪ್ರವೃತರಾಗಿದ್ದಾರಾ ಎಂಬ ಅನುಮಾನ ಮೂಡಿದೆ. ರಸ್ತೆಬದಿಗಳಲ್ಲಿ ಓಡಾಡುತ್ತಿದ್ದ ಹಾಗೂ ಬಯಲು ಪ್ರದೇಶದಲ್ಲಿ ಕಟ್ಟಿದ್ದ ರಾಸುಗಳು ಕಳ್ಳರ ಪಾಲಾಗುತ್ತಿದ್ದವು. ಈಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳು ಕಳ್ಳತನವಾಗಿರೋದು ಮಲೆನಾಡಿಗರ ಆತಂಕಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ರೈತ ಕುಟುಂಬ ಪೊಲೀಸರಿಗೆ ದೂರು ಕೂಡ ನೀಡಿದೆ.

Leave a Reply