ಎರಡು ಮನೆಯಿಂದ ಸೇರಿ ಒಟ್ಟು 6.78 ಲಕ್ಷ ಸಿಕ್ಕಿದೆ – ಡಿ.ಕೆ.ಸುರೇಶ್ ಸ್ಪಷ್ಟನೆ

– ಯಾವುದೇ ಆಭರಣಗಳನ್ನ ವಶಪಡಿಸಿಕೊಂಡಿಲ್ಲ
– ಡಿ.ಕೆ.ಸುರೇಶ್‍ಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಸೇರಿ ಒಟ್ಟು 6.78 ಲಕ್ಷ ರೂಪಾಯಿಗಳು ಸಿಕ್ಕಿರುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಸಿಬಿಐ ನಡೆಸಿದ ದಾಳಿಯಲ್ಲಿ ಸಿಕ್ಕಿ ಹಣದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ ಡಿ.ಕೆ.ಸುರೇಶ್ ಕೊರೊನಾ ಸೋಂಕು ದೃಢವಾಗಿದೆ. ಇದನ್ನೂ ಓದಿ: 57 ಲಕ್ಷ ಹಣ ಪತ್ತೆ – ಡಿಕೆ ಸುರೇಶ್‌ ಅವರೇ ಈಗ ಏನು ಹೇಳ್ತೀರಿ?

ಡಿ.ಕೆ.ಸುರೇಶ್ ಸರಣಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ಪ್ರಮುಖವಾಗಿ ಕನಕಪುರ, ಬೆಂಗಳೂರು ಮತ್ತು ದೆಹಲಿಯ ನಮ್ಮ ಮನೆ ಮತ್ತು ಕಚೇರಿಗಳಿಗೆ ಬಂದು ಯಾವುದೇ ಕಿರುಕುಳ ನೀಡದೇ ವೃತ್ತಿಪರವಾಗಿ ನಡೆದುಕೊಂಡ ಸಿಬಿಐ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಸೇರಿ ಒಟ್ಟು 6.78 ಲಕ್ಷ ರೂಪಾಯಿಗಳು ಸಿಕ್ಕಿರುತ್ತದೆ. ಅದರಲ್ಲಿ ನನ್ನ ದೆಹಲಿ ನಿವಾಸದಲ್ಲಿ 1.57 ಲಕ್ಷ, ಬೆಂಗಳೂರಿನ ನನ್ನ ಅಣ್ಣನ ನಿವಾಸದಲ್ಲಿ 1.71 ಲಕ್ಷ, ಅವರ ಬೆಂಗಳೂರಿನ ಕಚೇರಿಯಲ್ಲಿ 3.5 ಲಕ್ಷ ರೂಪಾಯಿಗಳು ಅಧಿಕಾರಿಗಳಿಗೆ ಸಿಕ್ಕಿರುವುದು ಖಾತ್ರಿ ಪಡಿಸಿದ್ದಾರೆ ಎಂದು ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಇನ್ನು ನನ್ನ ಅಣ್ಣನ ದೆಹಲಿ ಮನೆ ಮತ್ತು ನನ್ನ ಬೆಂಗಳೂರಿನ ಮನೆಯಲ್ಲಿ ಯಾವುದೇ ಹಣ ಸಿಕ್ಕಿರುವುದಿಲ್ಲ. ಹಾಗೆಯೇ ನಮ್ಮ ಎರಡೂ ಮನೆಗಳಲ್ಲಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಆಭರಣಗಳನ್ನೂ ವಶಪಡಿಸಿಕೊಂಡಿಲ್ಲ ಎಂದು ಡಿ.ಕೆ.ಸುರೇಶ್ ತಿಳಿಸಿದರು.

ಆಭರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಐಟಿ ಮತ್ತು ಐಟಿಗೆ ಕೊಟ್ಟ ದಾಖಲೆಗಳನ್ನೇ ಮತ್ತೊಮ್ಮೆ ಸಿಬಿಐ ಸ್ಪಷ್ಟನೆ ತೆಗೆದುಕೊಂಡಿದೆ. ಇನ್ನು ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಒಟ್ಟು 57 ಲಕ್ಷ ಸಿಕ್ಕಿದ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ ಬಾಕಿ 50.22 ಲಕ್ಷ ಹಣ ಎಲ್ಲಿ ಸಿಕ್ಕಿದೆ, ಅದರ ಹಿನ್ನೆಲೆ ಏನು ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕು ಎಂದರು.

ಈ ಹಿಂದೆ ಐಡಿ ಮತ್ತು ಇಡಿ ಅಧಿಕಾರಿಗಳು ಪರಿಶೀಲಿಸಿದ ದಾಖಲೆಗಳ ನಕಲು ಪ್ರತಿಗಳನ್ನು ಸಿಬಿಐ ಕಡೆ ಕೊಟ್ಟಿರುತ್ತೇವೆ. ಇನ್ನು ಮುಂದೆಯೂ ಬೇಕಾದ ಎಲ್ಲಾ ದಾಖಲೆಗಳನ್ನು ಒಪ್ಪಿಸಲು ತಯಾರಿದ್ದೇವೆ. ಈ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ಹೊರಬರುವ ವಿಶ್ವಾಸ ನಮಗಿದೆ. ಅಭಿಮಾನಿಗಳು ಮತ್ತು ಹಿತೈಷಿಗಳಾದ ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ.

ಸಿಬಿಐ ರೇಡ್:
ಕೆಪಿಸಿಸಿ ಅಧ್ಯಕ್ಷ ಡಿಕೆಶಿಯ ಬೆಂಗಳೂರಿನ ಸದಾಶಿನಗರದ ನಿವಾಸ, ದೊಡ್ಡ ಆಲಹಳ್ಳಿ ನಿವಾಸ ಮತ್ತು ಸಂಸದ ಡಿ.ಕೆ ಸುರೇಶ್ ಅವರ ಕೆಂಕೆರೆ ನಿವಾಸ, ದೆಹಲಿಯ ಕಾವೇರಿ ಅಪಾರ್ಟ್‍ಮೆಂಟ್, ಮುಂಬೈ ಸೇರಿದಂತೆ ಒಟ್ಟು 14 ಕಡೆ ಏಕಕಾಲದಲ್ಲಿ 60ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಬರೋಬ್ಬರಿ 12 ಗಂಟೆಗಳ ಕಾಲ ಅಂದರೆ ಸೋಮವಾರ ಸಂಜೆ 6 ಗಂಟೆಯವರೆಗೂ ಜಾಲಾಡಿದ ಸಿಬಿಐ, 57 ಲಕ್ಷ ರೂಪಾಯಿ ನಗದು, ಬ್ಯಾಂಕ್ ದಾಖಲೆ, ಇತರೆ ದಾಖಲೆ, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಸೇರಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಕೊರೊನಾ:
ಡಿ.ಕೆ.ಸುರೇಶ್ ಅವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. “ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯಕ್ಕೆ ನನ್ನ ಆರೋಗ್ಯ ಸ್ಥಿರವಾಗಿದೆ ಹಾಗೂ ಸುರಕ್ಷಿತವಾಗಿ ಇದ್ದೇನೆ. ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿ ಇದ್ದ ಸ್ನೇಹಿತರು, ಬಂಧುಗಳು ಹಾಗೂ ನನ್ನ ಜೊತೆಗೆ ಇದ್ದ ಸಿಬಿಐ ಅಧಿಕಾರಿಗಳು, ಮಾಧ್ಯಮ ಮಿತ್ರರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ವಿನಂತಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *