ಎರಡು ತಿಂಗಳಿಂದ RTPS ಬಂದ್ – ಸಂಪೂರ್ಣ ಮುಚ್ಚುವ ಭೀತಿಯಲ್ಲಿ ಕಾರ್ಮಿಕರು

ರಾಯಚೂರು: ಇಡೀ ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ನೀಡುತ್ತಿದ್ದ ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ ಟಿಪಿಎಸ್ ಕಳೆದ ಎರಡು ತಿಂಗಳಿಂದ ಸಂಪೂರ್ಣ ಬಂದ್ ಆಗಿದೆ. ಇದರಿಂದ ನೂರಾರು ಜನ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೆ ವಿದ್ಯುತ್ ಕೇಂದ್ರವನ್ನ ಸಂಪೂರ್ಣ ಮುಚ್ಚುವ ಯೋಚನೆ ಸರ್ಕಾರದ ಮಾಡಿದೆಯಾ ಅನ್ನೋ ಅನುಮಾನ ಕಾರ್ಮಿಕರನ್ನ ಕಾಡುತ್ತಿದೆ.

ಶಕ್ತಿ ನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ ಟಿಪಿಎಸ್ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಕಾಲ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ಕಳೆದ ಎರಡು ತಿಂಗಳಿಂದ ವಿದ್ಯುತ್ ಕೇಂದ್ರದ ಎಲ್ಲಾ ಎಂಟು ಘಟಕಗಳು ಸಂಪೂರ್ಣ ಬಂದ್ ಆಗಿವೆ. 1,720 ಮೆಗಾ ವ್ಯಾಟ್ ಸಾಮರ್ಥ್ಯ ವಿದ್ಯುತ್ ಕೇಂದ್ರ ಈಗ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿಲ್ಲ. ಇದರಿಂದಾಗಿ ಆರ್ ಟಿಪಿಎಸ್ ನ ಸುಮಾರು 500 ಜನ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕೇಂದ್ರದ ಹಿರಿಯ ನೌಕರರು, ಬಹಳಷ್ಟು ಇಂಜಿನಿಯರ್ ಗಳನ್ನ ವೈಟಿಪಿಎಸ್ ಹಾಗೂ ರಾಜ್ಯದ ವಿವಿಧ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ನಿಯೋಜಿಸಲಾಗಿದೆ.

ಹಿಂದೆಂದೂ ಕೇಂದ್ರ ಎಲ್ಲಾ ಘಟಕಗಳನ್ನು ಬಂದ್ ಮಾಡಿರಲಿಲ್ಲ. ತೀವ್ರತರದ ಕಲ್ಲಿದ್ದಲು ಅಥವಾ ನೀರಿನ ಸಮಸ್ಯೆಯಾದಾಗ ಮಾತ್ರ ಹೆಚ್ಚು ಘಟಕಗಳನ್ನ ಸ್ಥಗಿತಗೊಳಿಸಲಾಗುತ್ತಿತ್ತು. ಆದ್ರೆ ಈಗ ಕೊರೋನಾ ಲಾಕ್‍ಡೌನ್ ಹಿನ್ನೆಲೆ ವಿದ್ಯುತ್ ಬಳಕೆ ಪ್ರಮಾಣ ಇಳಿಕೆ ಹಾಗೂ ರಾಜ್ಯದಲ್ಲಿ ಸುರಿದ ಉತ್ತಮ ಮಳೆಯಿಂದ ವಿದ್ಯುತ್ ಬೇಡಿಕೆ ಕುಸಿದಿದೆ ಎನ್ನಲಾಗಿದೆ. ಆದ್ರೆ ಕಾರ್ಮಿಕ ಹೋರಾಟಗಾರರು ಮಾತ್ರ ಸರ್ಕಾರ ಜಿಲ್ಲೆಗೆ ಹಾಗೂ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಅಂತ ಆರೋಪಿಸಿದ್ದಾರೆ.

ಜಲ ವಿದ್ಯುತ್ ಸ್ಥಾವರ ಹಾಗೂ ಸೋಲಾರ್ ವಿದ್ಯುತ್ ಸ್ಥಾವರಗಳಲ್ಲಿ ಒಂದು ಯೂನಿಟ್ ವಿದ್ಯುತ್ ಉತ್ಪಾದನೆಗೆ 1 ರೂಪಾಯಿ 60 ಪೈಸೆ ಖರ್ಚು ಬಂದ್ರೆ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ 5 ರೂಪಾಯಿ 30 ಪೈಸೆ ಖರ್ಚು ಬರುತ್ತೆ ಅನ್ನೋದು ಅಧಿಕಾರಿಗಳ ಸಮಜಾಯಿಸಿ. ಹೀಗಾಗಿ ಆರ್ ಟಿ ಪಿಎಸ್ ಹಾಗೂ ಬಳ್ಳಾರಿಯ ಬಿಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿವೆ. ಇನ್ನೂ ಯರಮರಸ್‍ನ ವೈಟಿಪಿಎಸ್‍ನ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಉತ್ಪಾದನಾ ವೆಚ್ಚದ ಕಾರಣಕ್ಕೆ ಕಾರ್ಮಿಕರಿಗೆ ಅನ್ಯಾಯವಾಗಬಾರದು ಅನ್ನೋ ಕೂಗು ಹೆಚ್ಚಾಗಿದೆ.

ರಾಜ್ಯದಲ್ಲಿ ಸದ್ಯ ಒಟ್ಟು 6,354 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದು ಜಲ, ಪವನ, ಸೋಲಾರ್ ಹಾಗೂ ಇನ್ನಿತರ ಮೂಲಗಳಿಂದ ಸರಿದೂಗಿಸಲಾಗುತ್ತಿದೆ. ಆದ್ರೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನ ಮಾತ್ರ ಬಂದ್ ಮಾಡುವ ಮೂಲಕ ಕಾರ್ಮಿಕರನ್ನ ಬೀದಿಗೆ ತಳ್ಳಲಾಗಿದೆ.

Comments

Leave a Reply

Your email address will not be published. Required fields are marked *