ಎರಡನೇ ಮದ್ವೆಯಾಗಿ ಹೆಂಡ್ತಿ ಕೋಪಕ್ಕೆ ತುತ್ತಾದ ಗಂಡ ಸುಟ್ಟು ಭಸ್ಮವಾದ

– ಪತಿಗೆ ಮದ್ಯ ಕುಡಿಸಿ, ತಲೆಗೆ ಹೊಡೆದು ಕತ್ತು ಕೊಯ್ದು ಕೊಲೆ
– ಕೊಲೆಗೈದು ಕಾರಿನ ಡಿಕ್ಕಿಯಲ್ಲಿಟ್ಟು ಬೆಂಕಿ ಹಚ್ಚಿದ ಪತ್ನಿ

ಹಾಸನ: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಆದರೆ ಇಲ್ಲಿ ಹೆಂಡತಿಯೇ ಗಂಡನನ್ನ ಕೊಲೆ ಮಾಡಿ ಕಾರಿನ ಡಿಕ್ಕಿಯಲ್ಲಿಟ್ಟು ಗುರುತೇ ಸಿಗದಂತೆ ಸುಟ್ಟು ಹಾಕಿದ ತಪ್ಪಿಗೆ ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ.

ಅಕ್ಟೋಬರ್ 28 ರಂದು ಬೆಳ್ಳಂಬೆಳಗ್ಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮಟ್ಟನವಿಲೆ ಗ್ರಾಮದ ಸಮೀಪ ಕಾರೊಂದು ಸುಟ್ಟ ಸ್ಥಿತಿಯಲ್ಲಿದ್ದು, ಅದರ ಡಿಕ್ಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಹಿರೀಸಾವೆ ಪೊಲೀಸರು ಇದು ಲಕ್ಷ್ಮೀಪುರ ಗ್ರಾಮದ 25 ವರ್ಷದ ದಿನೇಶ್ ಎಂಬಾತನ ಮೃತದೇಹ ಎಂಬುದನ್ನು ಪತ್ತೆಹಚ್ಚಿದ್ದರು. ದಿನೇಶ್ ಕಳೆದ ನಾಲ್ಕು ವರ್ಷಗಳ ಹಿಂದೆ ಅಭಿಲಾಷಳನ್ನು ಮದುವೆಯಾಗಿದ್ದನು.

ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ದಿನೇಶ್ ಕುಟುಂಬದೊಂದಿಗೆ ನಗರದಲ್ಲಿ ನೆಲೆಸಿದ್ದ. ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮುದ್ದಾದ ಮಕ್ಕಳಿವೆ. ಆದರೆ ಇತ್ತೀಚೆಗೆ ಬೇರೋಬ್ಬಳನ್ನು ಮದುವೆಯಾಗಿ ಮೊದಲ ಹೆಂಡತಿ ಜೊತೆ ದಿನೇಶ್ ಅಂತರ ಕಾಯ್ದುಕೊಂಡಿದ್ದ. ಈ ಬಗ್ಗೆ ಆಗಾಗ ದಂಪತಿ ನಡುವೆ ಗಲಾಟೆಯಾಗಿತ್ತು. ಇದರಿಂದ ಕೋಪಗೊಂಡ ಅಭಿಲಾಷ ತನ್ನ ಗಂಡನ ಜೊತೆ ಪ್ರೀತಿಯಿಂದ ಮಾತನಾಡಿ ಅಕ್ಟೋಬರ್ 27ರ ರಾತ್ರಿ ಮನೆಗೆ ಕರೆಸಿಕೊಂಡಿದ್ದು, ಗಂಡ ದಿನೇಶನಿಗೆ ಮದ್ಯಪಾನ ಮಾಡಿಸಿದ್ದಾಳೆ. ನಂತರ ತನ್ನ ತಂದೆ ಮಂಜುನಾಥ್, ತಮ್ಮ ಬಸವರಾಜನೊಂದಿಗೆ ಸೇರಿ ಗಂಡನ ತಲೆಗೆ ಹೊಡೆದು, ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾಳೆ.

ಬೆಂಗಳೂರಿನಲ್ಲಿ ಕೊಲೆ ಮಾಡಿದ ನಂತರ ಗಂಡನ ಮೃತದೇಹವನ್ನು ಚನ್ನರಾಯಪಟ್ಟಣದ ಮಟ್ಟನವಿಲೆ ಬಳಿ ಕಾರಿನಲ್ಲಿ ತಂದು, ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮೃತದೇಹದ ಗುರುತು ಸಿಗದ ಹಾಗೇ ಸುಟ್ಟು ಹಾಕಿದ್ರು. ಯಾವ ಸುಳಿವೂ ಇಲ್ಲದೆ ಕಗ್ಗಂಟಾಗಿದ್ದ ಪ್ರಕರಣವನ್ನು ಕಾರಿನ ಚಾರ್ಸಿ ನಂಬರ್ ಸಹಾಯದಿಂದ ವಿಳಾಸ ಪಡೆದು ಬೇಧಿಸಿದ ಪೊಲೀಸರು ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.

ಗಂಡನ ಮತ್ತೊಂದು ಮದುವೆಯಿಂದ ಬೇಸತ್ತ ಹೆಂಡತಿ, ಕೋಪದ ಕೈಗೆ ಬುದ್ಧಿ ಕೊಟ್ಟು ಗಂಡನನ್ನೇ ಕೊಲೆ ಮಾಡಿದ್ದಾಳೆ. ಇದರಿಂದ ಗಂಡ ಸುಟ್ಟು ಬೂದಿಯಾಗಿದ್ರೆ ಹೆಂಡತಿ ಜೈಲು ಪಾಲಾಗಿದ್ದಾಳೆ. ಆದ್ರೆ ಏನೂ ತಪ್ಪು ಮಾಡದ ಮಕ್ಕಳು ಮಾತ್ರ ತಂದೆ, ತಾಯಿ ಇಬ್ಬರೂ ಇಲ್ಲದೆ ಅನಾಥರಾಗಿದ್ದಾರೆ.

Comments

Leave a Reply

Your email address will not be published. Required fields are marked *