ಎಪಿಎಂಸಿ ಕಾಯ್ದೆಗೆ ತಿದ್ದುಪಡಿ – ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ

ಬೆಂಗಳೂರು: ಪ್ರತಿಪಕ್ಷಗಳು, ರೈತರ ವಿರೋಧದ ನಡುವೆಯೂ ವಿವಾದಾತ್ಮಕ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ಧಿ (ಎಪಿಎಂಸಿ) ಮಸೂದೆ ಸುಗ್ರೀವಾಜ್ಞೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮಂಗಳವಾರವಷ್ಟೇ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದರು. ಕಾರ್ಪೊರೇಟ್ ಕಂಪನಿಗಳಿಗೆ ಕೆಂಪು ಹಾಸು ಹಾಸುವ ಈ ಸುಗ್ರೀವಾಜ್ಞೆ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಸುಗ್ರೀವಾಜ್ಞೆಯನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಂಪುಟ ಸಮಿತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ವರ್ತಕರ ಏಕಸ್ವಾಮ್ಯ ಇಲ್ಲದಂತಾಗುತ್ತದೆ. ಈ ಕಾಯಿದೆಯಿಂದ ರೈತರಿಗೆ ಹೆಚ್ಚು ಅನುಕೂಲ ಆಗಲಿದೆ ಅಂತ ಸಮರ್ಥಿಸಿಕೊಂಡಿದ್ದರು. ಹೀಗಾಗಿ, ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಎಪಿಎಂಸಿ ಕಾಯಿದೆ ಜೊತೆಗೆ ಬಿಡಿಎ ಕಾಯಿದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೂ ಕೂಡ ಕ್ಯಾಬಿನೆಟ್ ಸಮ್ಮತಿಸಿದೆ.

ಎಪಿಎಂಸಿ ಸುಗ್ರೀವಾಜ್ಞೆಯಲ್ಲಿ ಏನಿದೆ?
ಎಪಿಎಂಸಿಯ 2 ಸೆಕ್ಷನ್‍ಗಳಿಗೆ ಮಾತ್ರ ತಿದ್ದುಪಡಿ ಮಾಡಲಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಬೇಕು ಎಂಬ ಸೆಕ್ಷನ್ ಗೆ ತಿದ್ದುಪಡಿ ಮಾಡಲಾಗಿದ್ದು ಇನ್ಮುಂದೆ ರೈತರು ಮಾರುಕಟ್ಟೆ ಮಾತ್ರವಲ್ಲ, ಎಲ್ಲಿ ಬೇಕಾದರೂ ಮಾರಬಹುದಾಗಿದೆ. ಆಯಾ ತಾಲೂಕು ಮಾರುಕಟ್ಟೆ ಸಮಿತಿ ಇದ್ದೇ ಇರುತ್ತದೆ. ಆದರೆ, ಮಾರುಕಟ್ಟೆ ಒಳಗೆ ಮಾತ್ರ ಸಮಿತಿಗೆ ನಿಯಂತ್ರಣ ಇರುತ್ತದೆ. ರಾಜ್ಯ ಸರ್ಕಾರ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಅಧಿಕಾರ ಮೊಟಕುಗೊಳಿಸಿಲ್ಲ.

ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡುತ್ತಿರುವುದಕ್ಕೆ ಬಿಎಸ್‍ವೈ ಕ್ಯಾಬಿನೆಟ್‍ನ ಹಲವು ಸಚಿವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತೂ, ಕಾಯಿದೆ ತಿದ್ದುಪಡಿಗೆ ಸರ್ಕಾರ ಒಪ್ಪಬಾರದು. ರಾಜ್ಯದ ವಿಷಯಕ್ಕೆ ಕೇಂದ್ರ ಒತ್ತಡ ಹೇರಿ ತಿದ್ದುಪಡಿಗೆ ಮುಂದಾಗುವುದು ಒಕ್ಕೂಟ ವ್ಯವಸ್ಥೆಗೆ ಮಾರಕ. ತಿದ್ದುಪಡಿಯಾದರೆ ಕೃಷಿ ಕ್ಷೇತ್ರ ನಾಶವಾಗಲಿದೆ ಎಂದಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್ ಮಾಡಿದ್ದು, ರೈತ ಸಮುದಾಯದ ಅಭಿಪ್ರಾಯ ಪಡೆಯದೇ, ಸದನದಲ್ಲಿ ಕಾಯಿದೆ ಮಂಡಿಸದೇ ಜಾರಿಗೆ ತರಬಾರದು ಎಂದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ, ರೈತರ ಬದುಕನ್ನು ಅಭದ್ರಗೊಳಿಸುವ, ಬಹುರಾಷ್ಟ್ರೀಯ ಕಂಪನಿಗಳ ದಾಸ್ಯಕ್ಕೆ ಒಳಪಡಿಸುವ ಈ ಸುಗ್ರೀವಾಜ್ಞೆಗೆ ಸರ್ಕಾರ ಯಾವುದೇ ಕಾರಣಕ್ಕೂ ಮುಂದಾಗಬಾರದು. ಇದು ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ಅಂತ ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *