ಎತ್ತಿಗೆ ಜ್ವರ ಬಂದ್ರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸ್ತಿದೆ- ಶಿಕ್ಷಕರಿಗೆ ರಜೆ ನೀಡದ್ದಕ್ಕೆ ಎಚ್‍ಡಿಕೆ ಆಕ್ರೋಶ

ಬೆಂಗಳೂರು: ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ ಎಂದು ಶಿಕ್ಷಕರಿಗೆ ಮಧ್ಯಂತರ ರಜೆಯನ್ನು ನೀಡದ್ದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಶಿಕ್ಷಕರ ಪರ ಸರಣಿ ಟ್ವೀಟ್ ಮಾಡುವ ಮೂಲಕ ರಜೆ ನೀಡದ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. “ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಕೊರೊನಾದ ಸಂಕಷ್ಟದ ಸಮಯದಲ್ಲೂ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ಶಾಲೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ” ಎಂದರು.

“ಸರ್ಕಾರಿ ಶಾಲೆ ಶಿಕ್ಷಕರು ಕೋವಿಡ್ ಕರ್ತವ್ಯ ಹಾಗೂ ವಿದ್ಯಾಗಮ ಯೋಜನೆಯಡಿ ಈ ದಿನದ ತನಕ ಕೆಲಸ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ವರ್ಷ ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯನ್ನು ರದ್ದುಗೊಳಿಸಿ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ವರ್ಷದ ಅಕ್ಟೋಬರ್ 3 ರಿಂದ 26 ರವರೆಗೆ ನೀಡಬೇಕಿದ್ದ ಮಧ್ಯಂತರ ರಜೆಯನ್ನು ಸರ್ಕಾರ ರದ್ದು ಮಾಡಿರುವುದಕ್ಕೆ ಆಧಾರ ಏನು? ಶಿಕ್ಷಕರೆಂದರೆ ಸರ್ವಾಧಿಕಾರದ ಕೆಳಗೆ ದುಡಿಯುವ ದಿನಗೂಲಿ ನೌಕರರೆ? ಎಂದಿದ್ದಾರೆ.

ಕೊರೊನಾ ಕಾರಣಕ್ಕೆ ಮಕ್ಕಳು ಶಾಲೆಗೆ ಬಾರದಿದ್ದರೂ ಶಿಕ್ಷಕರನ್ನು ಅನ್ಯ ಸೇವೆಗೆ ಯಥೇಚ್ಛವಾಗಿ ಬಳಸಲಾಗುತ್ತಿದೆ. ಆದಾಗ್ಯೂ ಮಧ್ಯಂತರ ರಜೆ ರದ್ದುಪಡಿಸಿ ಸರ್ಕಾರ ಯಾವ ಪುರುಷಾರ್ಥ ಸಾಧನೆಗೆ ಹೊರಟಿದೆ? ಎಂದು ಎಚ್‍ಡಿಕೆ ಪ್ರಶ್ನೆ ಮಾಡಿದ್ದಾರೆ.

ಶಿಕ್ಷಕ ಸಮೂಹವನ್ನು ಗೌರವದಿಂದ ನಡೆಸಿಕೊಳ್ಳಬೇಕಾದ ಸರ್ಕಾರ, ದರ್ಪದ ಆದೇಶಗಳನ್ನು ಜಾರಿ ಮಾಡಿ ಶಾಪಕ್ಕೆ ಗುರಿಯಾಗುತ್ತಿದೆ. ‘ಹರ ಮುನಿದರೂ ಗುರು ಕಾಯ್ವನು’ ಎಂಬುದನ್ನು ಸರ್ಕಾರ ಮರೆಯಬಾರದು. ರಾಜ್ಯ ಸರ್ಕಾರ ಅಕ್ಟೋಬರ್ 1ರಂದು ಮಧ್ಯಂತರ ರಜಾ ರದ್ದುಪಡಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಶಿಕ್ಷಕರಿಗೆ ಮಧ್ಯಂತರ ರಜೆ ಘೋಷಿಸಬೇಕು” ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದರು.

Comments

Leave a Reply

Your email address will not be published. Required fields are marked *