ಎಕ್ಸಾಂ ಫೀಸ್ ಪಾವತಿಸಿ – ವಿದ್ಯಾರ್ಥಿಗಳ ಬಳಿ ಸುಲಿಗೆಗೆ ಇಳಿದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

ಬೆಂಗಳೂರು: ಕೋವಿಡ್‌ 19ನಿಂದಾಗಿ ಪರೀಕ್ಷೆ ರದ್ದಾಗಿದ್ದರೂ ಪರೀಕ್ಷಾ ಶುಲ್ಕವನ್ನು ಪಾವತಿಸುವಂತೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಅಧಿಸೂಚನೆ ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸ್ನಾತಕೋತ್ತರ ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್‌ ಪರೀಕ್ಷೆ ನಡೆಸುವುದಿಲ್ಲ. ಆದರೆ ಆಗಸ್ಟ್ 15 ಒಳಗಡೆ ಕಡ್ಡಾಯವಾಗಿ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಮಾಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಎಲ್ಲ ಕಾಲೇಜು, ವಿಶ್ವವಿದ್ಯಾಲಯಗಳಿಗೆ ಆದೇಶ ನೀಡಿದೆ. ಪರೀಕ್ಷೆ ನಡೆಸಿದರೆ ಶುಲ್ಕ ಪಡೆದುಕೊಳ್ಳುವುದು ಸರಿ. ಆದರೆ ಪರೀಕ್ಷೆ ಮಾಡದೇ ಶುಲ್ಕ ಪಡೆದುಕೊಳ್ಳುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ವಿವಿ ಆದೇಶದಲ್ಲಿ ಏನಿದೆ?
ಕರ್ನಾಟಕ ಸರ್ಕಾರದ ಜುಲೈ 10ರ ಆದೇಶದಂತೆ ಎರಡನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಬದಲಾಗಿ ಆಂತರಿಕ ಅಂಕಗಳು ಮತ್ತು ಹಿಂದಿನ ಸೆಮಿಸ್ಟರ್‌ ಅಂಕಗಳ ಸರಾಸರಿಯ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. 2ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಸಹ ಪರೀಕ್ಷಾ ಶುಲ್ಕ ಪಾವತಿಸುವುದು ಮತ್ತು ಪರೀಕ್ಷಾ ಅರ್ಜಿಗಳನ್ನು ಆಗಸ್ಟ್‌ 15ರ ಒಳಗಡೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *