ಎಎಸ್‍ಐ ಆಗಬೇಕಿದ್ದ ಮುಖ್ಯ ಪೇದೆ ಅಪಘಾತದಿಂದ ಸಾವು

– ಸಮವಸ್ತ್ರ ಸಿದ್ಧಪಡಿಸಿಕೊಂಡಿದ್ದ ಸಿದ್ದರಾಮಪ್ಪ

ಚಿಕ್ಕಮಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಂದು ಎಎಸ್‍ಐ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಮುಖ್ಯ ಪೇದೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿ ನಡೆದಿದೆ.

ಸಿದ್ದರಾಮಪ್ಪ(48) ಮೃತ ದುರ್ದೈವಿ. ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದರಾಮಪ್ಪ, ಚಿಕ್ಕಮಗಳೂರು ನಗರದಲ್ಲಿ ವಾಸವಿದ್ದರು. ಇಂದು ಕರ್ತವ್ಯ ಮುಗಿಸಿ ಚಿಕ್ಕಮಗಳೂರು ನಗರಕ್ಕೆ ಹಿಂದಿರುಗುವಾಗ ತಾಲೂಕಿನ ಹಿರೇಗೌಜ ಬಳಿ ಕಾರು-ಬೈಕ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೂಲತಃ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ನಿವಾಸಿಯಾದ ಸಿದ್ದರಾಮಪ್ಪ 25 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಇಂದು ಎಎಸ್‍ಐ ಆಗಿ ಭಡ್ತಿ ಪಡೆಯುತ್ತಿದ್ದರು. ಪ್ರಮೋಷನ್ ಸಿಕ್ಕ ಖುಷಿಯಲ್ಲಿ ಎಎಸ್‍ಐ ಸಮವಸ್ತ್ರ ಕೂಡ ಸಿದ್ಧಮಾಡಿಕೊಂಡಿದ್ದ ಸಿದ್ದರಾಮಪ್ಪ, ಕರ್ತವ್ಯ ಮುಗಿಸಿ ಖುಷಿಯಿಂದ ಮನೆಗೆ ಬರುವಾಗ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಎಎಸ್‍ಐ ಆಗಬೇಕಿದ್ದ ಸಿಬ್ಬಂದಿಯನ್ನ ಕಳೆದುಕೊಂಡ ಇಲಾಖೆ ಸಿಬ್ಬಂದಿ ಮರುಗಿದ್ದಾರೆ.

Comments

Leave a Reply

Your email address will not be published. Required fields are marked *