ಉಪ ಚುನಾವಣೆಗೂ, ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿಗೂ ಸಂಬಂಧವಿಲ್ಲ: ಪ್ರಹ್ಲಾದ್ ಜೋಶಿ

– ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ

ರಾಯಚೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ, ಸಿಬಿಐ ಮತ್ತು ಇಡಿ ದಾಳಿ ಒಂದೇ ದಿವಸಕ್ಕೆ ಆಗುವ ದಾಳಿಯಲ್ಲ ಎಂದು ಕೇಂದ್ರ ಕೇಂದ್ರ ಸಂಸದೀಯ ವ್ಯಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಪ್ರಹ್ಲಾದ್ ಜೋಶಿ, ಎಲ್ಲ ರೀತಿಯ ಪೂರ್ವಸಿದ್ಧತೆ ಮತ್ತು ಹೋಮ್ ವರ್ಕ್ ನಂತರವೇ ದಾಳಿ ಆಗುತ್ತದೆ. ಯಾವುದೇ ದಾಳಿ ಆದಾಗ ರಾಜಕೀಯ ಪ್ರೇರಿತ ಎಂದು ಹೇಳುವುದು ಸರಳ ಶಬ್ದವಾಗಿ ಬಿಟ್ಟಿದೆ. ಡಿ.ಕೆ.ಶಿವಕುಮಾರ್ ರಾಜಕೀಯಕ್ಕೆ ಬರುವ ಮೊದಲು ಹೇಗಿದ್ದರು ಈಗ ಹೇಗಿದ್ದಾರೆ ಎಲ್ಲವನ್ನೂ ನೋಡಿಕೊಂಡು ದಾಳಿ ನಡೆದಿರುತ್ತೆ. ಉಪಚುನಾವಣೆ ಸಂದರ್ಭಕ್ಕೂ ದಾಳಿಗೂ ಸಂಬಂಧವಿಲ್ಲ. ಡಿಕೆಶಿ ಸಿದ್ದರಾಮಯ್ಯ ಒಟ್ಟಿಗೆ ಇದ್ದಾಗಲೂ ನಾವು 25 ಸ್ಥಾನ ಗೆದ್ದಿದ್ದೇವೆ ಎಂದರು.

ಸದ್ಯ ನಾನು ಅಶೋಕ್ ಗಸ್ತಿ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ ಈಗ ಹೆಚ್ಚಿಗೆ ರಾಜಕಾರಣ ಮಾತನಾಡಲ್ಲ ಅಂತ ಪ್ರಹ್ಲಾದ್ ಜೋಶಿ ಹೇಳಿದರು. ಇನ್ನೂ ಅಶೋಕ್ ಗಸ್ತಿ ಹಾಗೂ ಅವರ ಕುಟುಂಬ ಪಕ್ಷಕ್ಕೆ ನಿಷ್ಠರಾಗಿದ್ದ ಹಿನ್ನೆಲೆ ಅವರಿಗೆ ರಾಜ್ಯಸಭಾ ಸ್ಥಾನ ಒಲಿದು ಬಂದಿತ್ತು, ಆದ್ರೆ ಒಂದು ಬಾರಿಯೂ ಅಧಿವೇಶನದಲ್ಲಿ ಭಾಗವಹಿಸದೇ ಅವರು ನಮ್ಮನ್ನಗಲಿ ಹೋಗಿದ್ದು ದುಃಖದ ಸಂಗತಿ ಅಂತ ಅವರ ನೆನಪುಗಳನ್ನ ಪ್ರಹ್ಲಾದ್ ಜೋಶಿ ಮೆಲುಕು ಹಾಕಿದರು.

Comments

Leave a Reply

Your email address will not be published. Required fields are marked *