– 25 ಸೆ.ಮೀ ದೂರದಲ್ಲಿದ್ದ ಪತ್ನಿಗೆ ಬಿದ್ದಿಲ್ಲ ಗುಂಡು
– ಇಸ್ರೇಲ್‌ನಿಂದ ಕೃತ್ಯ ಎಂದ ಇರಾನ್
ಟೆಹರಾನ್: ಇರಾನ್‌ನ ಟಾಪ್ ಅಣು ವಿಜ್ಞಾನಿ ಮೊಹ್ಸೆನ್ ಫಖ್ರಿಜಾದೆ ಅವರನ್ನು ಯಾರು ಹತ್ಯೆ ಮಾಡಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿದೆ. ಆದರೆ ಅವರನ್ನು ಉಪಗ್ರಹದಿಂದ ನಿಯಂತ್ರಿಸಲ್ಪಟ್ಟ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನ ಆಧರಿತ ಮಷಿನ್ ಗನ್ ಬಳಸಿ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಈಗ ಬೆಳಕಿಗೆ ಬಂದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು. ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರನ್ನು ಈ ರೀತಿಯಾಗಿ ಹತ್ಯೆ ಮಾಡಿದ್ದು, ತನ್ನ ವಿಜ್ಞಾನಿಯ ಹತ್ಯೆಗೆ ವೈರಿ ದೇಶವಾದ ಇಸ್ರೇಲ್ ಕಾರಣ ಎಂದು ಇರಾನ್ ಗಂಭೀರ ಆರೋಪ ಮಾಡಿದೆ.

ಅಂದು ಏನಾಯ್ತು?
11 ಮಂದಿ ಭದ್ರತಾ ಸಿಬ್ಬಂದಿ ಜೊತೆ ನವೆಂಬರ್ 27 ರಂದು 61 ವರ್ಷದ ಮೊಹ್ಸೆನ್ ಇರಾನ್ ರಾಜಧಾನಿ ಟೆಹ್ರಾನ್ ಹೊರವಲಯದ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದು ಮೊಹ್ಸೆನ್ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.
ಇಸ್ರೇಲ್ ಮೇಲೆ ಆರೋಪ ಯಾಕೆ?
ಘಟನೆ ನಡೆದ ಸ್ಥಳದಲ್ಲಿ ಮೇಡ್ ಇನ್ ಇಸ್ರೇಲ್ ಶಸ್ತ್ರಾಸ್ತಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೇ ನಿಂತ ವಾಹನದಿಂದ ಈ ದಾಳಿ ನಡೆದಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಘಟನೆ ನಡೆದ ಸ್ಥಳದಲ್ಲಿ ಭಯೋತ್ಪಾದಕರು ಇರಲಿಲ್ಲ. ಕ್ಯಾಮೆರಾ ಬಳಸಿ ಕಾರಿನಲ್ಲಿ ಬರುತ್ತಿದ್ದಾಗ ಅವರತ್ತ ಗನ್ ಕೇಂದ್ರೀಕರಿಸಿ ಈ ಕೃತ್ಯ ಎಸಗಲಾಗಿದೆ. ಉಪಗ್ರಹ-ನಿಯಂತ್ರಿತ ಸ್ಮಾರ್ಟ್ ವ್ಯವಸ್ಥೆ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇರುವ ಮಷಿನ್ ಗನ್ ಬಳಸಿ ಹತ್ಯೆ ಮಾಡಲಾಗಿದೆ ಎಂದು ಹಿರಿಯ ಕಮಾಂಡರ್‌ವೊಬ್ಬರ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ತಸ್ನಿಮ್ ವರದಿ ಮಾಡಿದೆ.
ಆರಂಭದಲ್ಲಿ 3-4 ಮಂದಿಯಿಂದ ಈ ಕೃತ್ಯ ನಡೆದಿದೆ. ಈ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ ನಂತರ ಯಾರು ಮೃತಪಟ್ಟಿಲ್ಲ ಎಂದು ವರದಿಯಾಗಿತ್ತು. ಈಗ ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಮಷಿನ್ ಗನ್ ಟ್ರಕ್‌ನಲ್ಲಿ ಇರಿಸಲಾಗಿತ್ತು. ಗನ್‌ನಿಂದ ಬುಲೆಟ್ ಫೈರ್ ಆದ ಬಳಿಕ ಟ್ರಕ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.

ಪತ್ನಿಗೆ ತಾಗಿಲ್ಲ:
ವಿಶೇಷ ಏನೆಂದರೆ ಮೊಹ್ಸೆನ್ ಅವರಿದ್ದ ಕಾರಿನಲ್ಲಿ ಪತ್ನಿಯೂ ಪ್ರಯಾಣಿಸುತ್ತಿದ್ದರು. 25 ಸೆಂಟಿಮೀಟರ್ ದೂರದಲ್ಲಿ ಕುಳಿತಿದ್ದ ಅವರ ಪತ್ನಿಗೆ ಒಂದು ಗುಂಡು ಬಿದ್ದಿರಲಿಲ್ಲ. 13 ಗುಂಡುಗಳು ನೇರವಾಗಿ ಮೊಹ್ಸೆನ್ ಅವರಿಗೆ ಬಿದ್ದಿದ್ದರೂ ಹತ್ತಿರದಲ್ಲೇ ಇದ್ದ ಪತ್ನಿಗೆ ತಗುಲಿರಲಿಲ್ಲ. ಇಷ್ಟೊಂದು ನಿಖರವಾಗಿ ಅತ್ಯಂತ ವ್ಯವಸ್ಥಿತವಾಗಿ ದಾಳಿ ನಡೆಯಬೇಕಾದರೆ ಅದು ಉಪಗ್ರಹ ಆಧಾರಿತ ಸ್ಮಾರ್ಟ್ ವ್ಯವಸ್ಥೆಯಿಂದ ಸಾಧ್ಯ ಎಂಬ ವಾದವನ್ನು ಇರಾನ್ ಮುಂದಿಟ್ಟಿದೆ.
ಇಸ್ರೇಲ್‌ನಿಂದ ಪ್ರತಿಕ್ರಿಯೆ ಇಲ್ಲ:
ಮೊಹ್ಸೆನ್ ಫಖ್ರಿಜಾದೆ ಅವರ ಹತ್ಯೆ ಸಂಬಂಧ ಇರಾನ್ ತನ್ನ ಮೇಲೆ ಮಾಡಿರುವ ಆರೋಪಕ್ಕೆ ಇಸ್ರೇಲ್ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ತನ್ನ ಶತ್ರು ರಾಷ್ಟ್ರವಾದ ಇರಾನ್‌ನ ಪರಮಾಣು ಕಾರ್ಯಕ್ರಮದ ರಹಸ್ಯ, ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಹೇಳಿತ್ತು.

ಯಾರು ಮೊಹ್ಸೆನ್?
1958ರಲ್ಲಿ ಜನಿಸಿ ಮೊಹ್ಸೆನ್ ಅವರು ಇರಾನ್ ಪರಮಾಣು ಯೋಜನೆಯ ರೂವಾರಿಯಾಗಿದ್ದರು. ಇರಾನ್ ರಕ್ಷಣಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ಪಾಶ್ಚಿಮಾತ್ಯ ದೇಶಗಳು ʼಫಾದರ್ ಆಫ್ ಇರಾನಿಯನ್ ಬಾಂಬ್ʼ ಎಂದೇ ಕರೆಯುತ್ತಿದ್ದುವು.
ಆತಂಕ ಯಾಕೆ?
ಪ್ರೊಫೆಸರ್ ಸ್ಟೀಫನ್ ಹಾಕಿಂಗ್ ಸೇರಿದಂತೆ 1 ಸಾವಿರ ಮಂದಿ ವಿಜ್ಞಾನಿಗಳು ಮಿಲಿಟರಿ ಕಾರ್ಯಾಚಾರಣೆಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆಯನ್ನು ನಿಷೇಧಿಸಬೇಕೆಂದು ಕೋರಿ ಪತ್ರ ಬರೆದಿದ್ದಾರೆ. ಒಂದು ವೇಳೆ ಇರಾನ್ ಆರೋಪವೇ ನಿಜವೇ ಆದಲ್ಲಿ ಮುಂದಿನ ದಿನಗಳಲ್ಲಿ ವಿರೋಧಿ ರಾಷ್ಟ್ರದ ಟಾಪ್ ವ್ಯಕ್ತಿಗಳನ್ನು ಇನ್ನೊಂದು ದೇಶ ಸುಲಭವಾಗಿ ಹತ್ಯೆ ಮಾಡಿ ದೇಶ ದೇಶಗಳ ನಡುವೆ ಯುದ್ಧವೇ ಸಂಭವಿಸುವ ಸಾಧ್ಯತೆಯಿದೆ.


Leave a Reply