ಉದ್ಯೋಗ ಕೊಡಿಸಿ ಎಂದ ವಲಸೆ ಕಾರ್ಮಿಕರು, ನಿಮ್ಮ ತಂದೆಯನ್ನು ಕೇಳಿ ಎಂದ ಶಾಸಕ

– ಉದ್ಯೋಗ ಸೃಷ್ಟಿಸಲು ನಿಮ್ಮಿಂದ ಸಾಧ್ಯವಾಗಿಲ್ಲವೇ ಕಾರ್ಮಿಕರ ಪ್ರಶ್ನೆ
– ಈ ಪ್ರಶ್ನೆಯನ್ನು ನಿಮ್ಮ ತಂದೆಗೆ ಕೇಳಿ ಎಂದ ಶಾಸಕ

ಪಾಟ್ನಾ: ಕಾರ್ಮಿಕರೊಬ್ಬರು ಬಿಹಾರದ ಜೆಡಿಯು ಶಾಸಕನನ್ನು ಉದ್ಯೋಗ ಕೊಡಿಸಿ ಎಂದು ಕೇಳಿದ್ದಕ್ಕೆ ನಿಮ್ಮ ತಂದೆಯನ್ನು ಕೇಳು ಎಂದು ಹಗುರವಾಗಿ ಮಾತನಾಡಿದ್ದಾರೆ.

ಬಿಹಾರದ ಶೈಖ್‍ಪುರ ವಿಧಾನಸಭಾ ಕ್ಷೇತ್ರದ ಶಾಸಕ ರಂಧಿರ್ ಸೋನಿ ಈ ನಿರ್ಲಕ್ಷ್ಯದ ಉತ್ತರ ನೀಡಿದ್ದು, ಕ್ವಾರಂಟೈನ್ ಕೇಂದ್ರಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲು ಹಾಗೂ ಅಲ್ಲಿನ ಪರಿಸ್ಥಿತಿ ನಿಭಾಯಿಸಲು ಕ್ಷೇತ್ರದ ಪ್ರವಾಸದಲ್ಲಿದ್ದ ಶಾಸಕರಿಗೆ ಕಾರ್ಮಿಕರು ಈ ಪ್ರಶ್ನೆ ಕೇಳಿದ್ದಾರೆ. ಉದ್ಯೋಗ ಒದಗಿಸಲು ಸರ್ಕಾರದಿಂದ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಅದೇ ಕೆಲಸವನ್ನು ನಿಮ್ಮ ತಂದೆ ಮಾಡಬಹುದಲ್ಲ ಎಂದು ಉತ್ತರಿಸಿದ್ದಾರೆ. ಅಲ್ಲದೆ ನಿನ್ನನ್ನು ಬೆಳೆಸಿದ ನಿಮ್ಮ ತಂದೆ ನಿಮಗೆ ಉದ್ಯೋಗ ನೀಡಿದ್ದಾರೆಯೇ ಎಂದು ಮರಳಿ ಪ್ರಶ್ನಿಸಿದ್ದಾರೆ.

ಹಲವು ವರ್ಷಗಳಿಂದ ನೀವು ನಮ್ಮ ಕ್ಷೇತ್ರದ ಶಾಸಕರಾಗಿದ್ದೀರಿ, ಉದ್ಯೋಗ ಸೃಷ್ಟಿಸಲು ನಿಮ್ಮಿಂದ ಯಾಕೆ ಸಾಧ್ಯವಾಗಲಿಲ್ಲ ಎಂದು ಕಾರ್ಮಿಕರು ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಪಕ ಉತ್ತರ ನೀಡುವ ಬದಲು ಶಾಸಕ ಕೆಂಡಾಮಂಡಲರಾಗಿದ್ದಾರೆ. ಅಲ್ಲದೆ ಬಿಹಾರದಲ್ಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜನ ಪ್ರಶ್ನೆ ಕೇಳುತ್ತಿದ್ದಾರೆ.

ವಿವಿಧ ರಾಜ್ಯಗಳಿಂದ ಮರಳಿದ ವಲಸೆ ಕಾರ್ಮಿಕರು ತಮ್ಮ ಸ್ವಂತ ರಾಜ್ಯದಲ್ಲಿ ಉಳಿದುಕೊಂಡು ರಾಜ್ಯವನ್ನು ಅಭಿವೃದ್ಧಿಪಡಿಸಬೇಕು. ಹೀಗಾಗಿ ಇಲ್ಲಿಯೇ ಕೆಲಸ ಮಾಡಿ ಎಂದು ಒತ್ತಾಯಿಸಿದ ಬೆನ್ನಲ್ಲೇ ಶಾಸಕರ ಈ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. 15 ವರ್ಷ ಆಡಳಿತ ನಡೆಸಿದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿರೋಧ ಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದ್ದು, ಇದೊಂದು ನಾಚಿಕೆಗೇಡಿನ ವಿಷಯ ಎಂದು ಹರಿಹಾಯ್ದಿದೆ. ಚರ್ಚೆಗೆ ಕಾರಣವಾಗುತ್ತಿದ್ದಂತೆ ಜೆಡಿಯು ಈ ಕುರಿತು ಪ್ರತಿಕ್ರಿಯಿಸಿದ್ದು, ಶಾಸಕರು ಅಸಂಬದ್ಧವಾಗಿ ಮಾತನಾಡಿದ್ದಾರೆ. ಪಕ್ಷ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಜೆಡಿಯು ವಕ್ತಾರ ಡಾ.ಅಜಯ್ ಅಲೋಕ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *