ಉದ್ಯಾನ ನಗರಿನಲ್ಲಿ ಕೊರೊನಾ ರಣಕೇಕೆ- ದ್ವಿಶತಕದತ್ತ ಹೆಜ್ಜೆ

ಬೆಂಗಳೂರು: ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ತನ್ನ ರಣಕೇಕೆಯನ್ನು ಹೆಚ್ಚಿಸಿದ್ದು, ಇಂದು ಬರೋಬ್ಬರಿ ಇಂದು 196 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 1272ಕ್ಕೇರಿದೆ.

ನಗರದಲ್ಲಿ ಸಮುದಾಯಕ್ಕೆ ಕೊರೊನಾ ಹರಡಿದೆಯೇ ಎಂಬ ಅನುಮಾನ ಮೂಡಿದ್ದು, ಇಂದು ಕೂಡ ಬೆಂಗಳೂರಿನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 64ಕ್ಕೆ ತಲುಪಿದೆ. ನಗರದಲ್ಲಿ 31 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ರಾಜ್ಯದಲ್ಲಿ ಒಂದು ಒಟ್ಟು ಐವರು ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 77 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವನ್ನಪ್ಪಿದವರ ವಿವರ:
ರೋಗಿ ಸಂಖ್ಯೆ 6,553, 53 ವರ್ಷದ ಮಹಿಳೆ. ಬೆಂಗಳೂರು ನಗರ ನಿವಾಸಿಯಾಗಿದ್ದು, ವಿಷಮ ಶೀತ ಜ್ವರದಿಂದ ಬಳಲುತ್ತಿದ್ದರು. ಜ್ವರ, ನೆಗಡಿ ಮತ್ತು ಕೆಮ್ಮಿನಿಂದ ಬಳುತ್ತಿದ್ದ ಮಹಿಳೆ ಜೂನ್ 10 ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಜೂನ್ 20 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ರೋಗಿ ಸಂಖ್ಯೆ 8872, 62 ವರ್ಷದ ಪುರುಷ. ವಿಷಮ ಶೀತ ಜ್ವರದಿಂದ ಬಳುತ್ತಿದ್ದ ವ್ಯಕ್ತಿ, ಮಧುಮೇಹ ಸಮಸ್ಯೆಯಿಂದ ಜೂನ್ 16 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ರೋಗಿ ಸಂಖ್ಯೆ 8880, 55 ವರ್ಷದ ಪುರುಷ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ನ್ಯುಮೋನಿಯಾ, ಬೊಜ್ಜು ಹಾಗೂ ದೀರ್ಘ ಕಾಲದಿಂದ ಮದ್ಯ ವ್ಯಸನಿಯಾಗಿದ್ದರು. ಜೂನ್ 18 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಜೂನ್ 20 ರಂದು ಸಾವನ್ನಪ್ಪಿದ್ದರು.

ರೋಗಿ ಸಂಖ್ಯೆ 9149, 70 ವರ್ಷದ ವೃದ್ಧ, ಕಂಟೈನ್‍ಮೆಂಟ್ ಝೋನ್ ಸಂಪರ್ಕ ಹೊಂದಿದ್ದ ಈ ವ್ಯಕ್ತಿ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಜೂನ್ 18 ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಸಾವನ್ನಪಿದ್ದರು.

ರೋಗಿ ಸಂಖ್ಯೆ 9150, 46 ವರ್ಷದ ಪುರುಷ. ದೇಹದಲ್ಲಿ ರೋಗ ನಿರೋಧ ಶಕ್ತಿ ದೌರ್ಬಲ್ಯದಿಂದ ಬಳಲುತ್ತಿದ್ದ ಇವರು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಜೂನ್ 17 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜೂನ್ 18 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಇವರಿಗೆ ಸೋಂಕು ಹರಡಿದ ಮಾಹಿತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡುತ್ತಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ಕೋವಿಡ್ ಸಂಖ್ಯೆಗಳ ಹೆಚ್ಚಳದಿಂದ ಎಚ್ಚೆತ್ತಿರುವ ಆರೋಗ್ಯ ಇಲಾಖೆ, ಸೋಂಕು ಪೀಡಿತ ಪ್ರದೇಶಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲು ಮುಂದಾಗಿದೆ. ಆಟೋ ಚಾಲಕರು. ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಹೈ-ರಿಸ್ಕ್ ಹೊಂದಿರುವ ಜನರಿಗೆ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನದಲ್ಲಿ 100ಕ್ಕೂ ಹೆಚ್ಚು ಮಂದಿಯೊಂದಿಗೆ ಸಂಪರ್ಕ ಕಲ್ಪಿಸುವ ವ್ಯಕ್ತಿಗಳಿಗೆ ರ್ಯಾಂಡಮ್ ಟೆಸ್ಟ್ ಮಾಡಲು ಯೋಜಿಸಲಾಗಿದೆ.

Comments

Leave a Reply

Your email address will not be published. Required fields are marked *